ಟ್ರಾನ್ಸ್ ಪೋರ್ಟ್ ಮಾಲಕರಿಗೆ ಹಲ್ಲೆ,ಬೆದರಿಕೆ : ಆರೋಪಿಗಳ ಬಂಧನ
ಸುರತ್ಕಲ್, ಎ.15: ಇಲ್ಲಿನ ಟ್ರಾನ್ಸ್ ಪೋರ್ಟ್ ಮಾಲಕರೊಬ್ಬರಿಗೆ ಹಲ್ಲೆ ನಡೆಸಿ ಹಫ್ತಾ ನೀಡುವಂತೆ ಬೆದರಿಕೆವೊಡ್ಡಿದ ತಂಡವನ್ನು ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿ ಕಾರೊಂದನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಕೋಡಿಕೆರೆ ನಿವಾಸಿಗಳಾದ ಚೇತನ್ ಆಲಿಯಾಸ್ ಚೇತು ಹಾಗೂ ನಾಗೇಶ್ ಕಾನಾ ಜನತಾ ಕಾಲನಿ ನಿವಾಸಿ ಕಾರ್ತಿಕ್ ಆತನ ಸಹೋದರ ಭರತ್ ಶೆಟ್ಟಿ, ಆಶ್ರಯ ಕಾಲನಿ ನಿವಾಸಿ ಗುರುರಾಜ್ ಎಂದು ತಿಳಿದು ಬಂದಿದೆ.
ಆರೋಪಿಗಳು ಕಳೆದ ಎ.12ರಂದು ಕಾನಾದ ಟಾನ್ಸ್ ಪೋರ್ಟ್ ಮಾಲಕರಾಗಿರುವ ಬಾಲಕೃಷ್ಣ ರಾವ್ ಎಂಬವರನ್ನು ಅಡ್ಡ ಗಟ್ಟಿ ರಾಡ್ ನಿಂದ ಗಂಭೀರ ಹಲ್ಲೆ ನಡೆಸಿದ್ದ ತಂಡ 50 ಸಾವಿರ ರೂ. ಹಫ್ತಾ ನೀಡುವಂತೆ ಬೆದರಿಕೆ ಹಾಕಿತ್ತು. ಈ ಸಂಬಂಧ ಹಲ್ಲೆಗೊಳಗಾಗಿದ್ದ ಬಾಲಕೃಷ್ಣ ರಾವ್ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಶುಕ್ರವಾರ ತಡರಾತ್ರಿ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಆರೋಪಿ ಚೇತನ್ ಎಂಬಾತನಿಗೆ ಸೇರಿದ್ದೆನ್ನಲಾದ ಕಾರೊಂದನ್ನು ವಶಕ್ಕೆ ಪಡೆದಿದ್ದಾರೆ