ಯುಎಪಿಎ: 5ವರ್ಷಗಳಲ್ಲಿ ಕೇರಳದಲ್ಲಿ 161 ಪ್ರಕರಣಗಳು!

Update: 2017-04-16 09:08 GMT

ತಿರುವನಂತಪುರಂ,ಎ. 16: ಕಾನೂನು ವಿರೋಧಿ ಚಟುವಟಿಕೆಗಳನ್ನು ತಡೆಯುವ ಕಾನೂನು( ಯುಎಪಿಎ) ಅಡಿಯಲ್ಲಿ ಕೇರಳದಲ್ಲಿ ಕಳೆದ ಐದು ವರ್ಷಗಳಲ್ಲಿ 161 ಕೇಸುಗಳನ್ನು ದಾಖಲಿಸಲಾಗಿದೆ. ಇದರಲ್ಲಿ 146 ಪ್ರಕರಣಗಳ ಆರೋಪಿ ಪಟ್ಟಿಯನ್ನೇ ದಾಖಲಿಸಿಲ್ಲ. ಮಾರ್ಚ್ ತಿಂಗಳ ಕೊನೆಗೆ ಮಾಡಲಾದ ಲೆಕ್ಕ ಪ್ರಕಾರ ಯುಎಪಿಎ ಹೇರಲಾದ 40 ಮಂದಿ ವಿಚಾರಣಾಧೀನ ಕೈದಿಗಳಿದ್ದಾರೆ. ಇವರಲ್ಲಿ ಹೊರರಾಜ್ಯಗಳ ಜನರು ಕೂಡಾ ಸೇರಿದ್ದಾರೆ. ಮಹಾರಾಷ್ಟ್ರದಿಂದ ಇಬ್ಬರು, ಕರ್ನಾಟಕ, ದಿಲ್ಲಿ, ತಮಿಳ್ನಾಡಿನಿಂದ ತಲಾ ಒಬ್ಬರು ಯುಎಪಿಯ ಕಾನೂನು ಪ್ರಕಾರ ಬಂಧಿಸಲ್ಪಟ್ಟು ವಿಚಾರಣಾಧೀನ ಕೈದಿಯಾಗಿ ಜೈಲಿನ ಕಂಬಿ ಎಣಿಸುತ್ತಿದ್ದಾರೆ.

ಹೆಚ್ಚಿನ ವರ ವಿರುದ್ಧ ಸಭೆ ಸೇರಿದ್ದು, ಘೋಷಣೆ ಕೂಗಿದ್ದು, ಕರಪತ್ರ ಹಂಚಿದ್ದು, ಪೋಸ್ಟರ್ ಅಂಟಿಸಿದ್ದು, ಪುಸ್ತಕ ಕೈವಶ ಇಟ್ಟುಕೊಂಡದ್ದು ಮುಂತಾದ ಅಪರಾಧಕ್ಕಾಗಿ ಯುಎಪಿಎ ಪ್ರಕಾರ ಪ್ರಕರಣದಾಖಲಿಸಿ ಜೈಲಿಗೆ ತಳ್ಳಲಾಗಿದೆ. ಕೇರಳದಲ್ಲಿ ಯುಎಪಿಎ ಹೇರಲ್ಪಟ್ಟ ಮೊದಲ ವ್ಯಕ್ತಿ ಪೀಪಲ್ಸ್ ಮಾರ್ಚ್ ಆಂಗ್ಲ ಮಾಸ ಪತ್ರಿಕೆಯ ಸಂಪಾದಕ ಪಿ. ಗೋವಿಂದನ್ ಕುಟ್ಟಿ ಆಗಿದ್ದಾರೆ. 2007ರಲ್ಲಿ ಎಲ್‌ಡಿಎಫ್ ಸರಕಾರದ ಕಾಲದಲ್ಲಿ ಈ ಕಾನೂನಿನಡಿಯಲ್ಲಿ ಬಂಧಿಸಿ ಗೋವಿಂದನ್ ಕುಟ್ಟಿ ಅವರನ್ನು ಎರಡು ತಿಂಗಳು ಜೈಲಿಗೆ ಹಾಕಲಾಗಿತ್ತು.

ಹತ್ತು ವರ್ಷ ಕಳೆದರೂ ಈ ಪ್ರಕರಣದಲ್ಲಿ ಪೊಲೀಸರಿಗೆ ಆರೋಪ ಪಟ್ಟಿ ಸಲ್ಲಿಸಲು ಸಾಧ್ಯವಾಗಿಲ್ಲ. ಮಾವೊವಾದಿ ನಾಯಕ ಮಲ್ಲರಾಜ ರೆಡ್ಡಿಗೆ ಅಡಗಿ ಕೂತುಕೊಳ್ಳಲು(ಭೂಗತರಾಗಲು) ಪೆರುಂಬಾವೂರಿನಲ್ಲಿ ಮನೆ ಮಾಡಿಕೊಟ್ಟದ್ದಾರೆ ಎನ್ನುವ ಆರೋಪಕ್ಕಾಗಿ ರೂಪೇಶ್-ಶೈನಾ ದಂಪತಿಯನ್ನು ಯುಎಪಿಎ ಕಾನೂನಿನಡಿ ಬಂಧಿಸಲಾಗಿದೆ. ಈವರೆಗೆ ಯುಎಪಿಎ ಕಾನೂನಿನ ಅಡಿಯಲ್ಲಿ ಅತಿ ಹೆಚ್ಚು (ಶೇ. 75ರಷ್ಟು) ಮುಸ್ಲಿಮರನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News