×
Ad

ಪೊಲೀಸ್ ಬೀಟ್ ವ್ಯವಸ್ಥೆಗೆ ಹೊಸ ರೂಪ: ಕಮಿಷನರ್ ಚಂದ್ರಶೇಖರ್

Update: 2017-04-16 17:07 IST

ಮಂಗಳೂರು, ಎ.16: ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಬೀಟ್ ವ್ಯವಸ್ಥೆಗೆ ಹೊಸ ರೂಪ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.

ರವಿವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಆಯುಕ್ತಾಲಯ ವ್ಯಾಪ್ತಿಯಲ್ಲಿ ಒಟ್ಟು 480 ಬೀಟ್ ಸ್ಥಳಗಳನ್ನು ಗುರುತಿಸಲಾಗಿದೆ. ಪ್ರತೀ ಬೀಟ್‌ಗೆ ಒಬ್ಬ ಪೊಲೀಸರನ್ನು ನೇಮಿಸಲಾಗಿದೆ. ಅವರು ಬೀಟ್ ವ್ಯಾಪ್ತಿಯ ಕನಿಷ್ಠ 50 ಮಂದಿಯ ಜೊತೆ ಸಂಪರ್ಕ ಬೆಳೆಸಿ ವಾರಕ್ಕೊಮ್ಮೆ ಸಭೆ ನಡೆಸಲಿದ್ದಾರೆ. ಬೀಟ್‌ಗೆ ನೇಮಿಸಿದ ಸಿಬ್ಬಂದಿಗೆ ಆಯಾ ಬೀಟಿನ ಉಸ್ತುವಾರಿ ನೀಡಲಾಗಿದೆ. ಅಂದರೆ ಬೀಟ್ ವ್ಯಾಪ್ತಿಯ ಸಮನ್ಸ್, ವಾರಂಟ್, ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣದ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಅಗತ್ಯವಿದ್ದರೆ ಎಸ್ಸೈ ಅಥವಾ ಎಎಸ್ಸೈಯ ನೆರವು ಪಡೆಯಬಹುದಾಗಿದೆ ಎಂದರು.

ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿ 33, ಮಂಗಳೂರು ಪೂರ್ವ (35), ಬರ್ಕೆ (20), ಉರ್ವ (31), ಮಹಿಳಾ (5), ದಕ್ಷಿಣ (41) ಗ್ರಾಮಾಂತರ (36), ಉಳ್ಳಾಲ (42), ಕೊಣಾಜೆ (32), ಕಂಕನಾಡಿ ನಗರ (21), ಪಣಂಬೂರು (24), ಕಾವೂರು (27), ಸುರತ್ಕಲ್ (37), ಬಜ್ಪೆ (34), ಮುಲ್ಕಿ (34), ಮೂಡುಬಿದಿರೆ (28) ಹೀಗೆ 16 ಠಾಣಾ ವ್ಯಾಪ್ತಿಯಲ್ಲಿ 480 ಬೀಟ್ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಡಾ. ಸಂಜೀವ ಪಾಟೀಲ್, ಮಂಗಳೂರು ಉತ್ತರ ಎಸಿಪಿ ರಾಜೇಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News