ಮೋತಿಹಾರಿಯಲ್ಲಿ ಗಾಂಧಿ ತಂಗಿದ್ದ ಮನೆ ಮ್ಯೂಸಿಯಂ ಆಗಿ ಅಭಿವೃದ್ಧಿ : ನಿತೀಶ್ ಕುಮಾರ್

Update: 2017-04-16 12:09 GMT

ಪಾಟ್ನಾ,ಎ.16: ಬಣ್ಣದ ತಯಾರಿಕೆಯಲ್ಲಿ ಬಳಕೆಯಾಗುವ ನೀಲಿ ಗಿಡಗಳ ರೈತರ ಭೇಟಿಗಾಗಿ ನೂರು ವರ್ಷಗಳ ಹಿಂದೆ ಚಂಪಾರಣ್ ಜಿಲ್ಲೆಯ ಮೋತಿಹಾರಿಗೆ ತೆರಳಿದ್ದ ಗಾಂಧೀಜಿಯವರು ಅಂದು ಅಲ್ಲಿ ತಂಗಿದ್ದ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಲ್ಲಿ ಪ್ರಕಟಿಸಿದ್ದಾರೆ.

ತನ್ನ ಮೋತಿಹಾರಿ ಭೇಟಿ ಸಂದರ್ಭ ಗಾಂಧೀಜಿಯವರು ಕೆಲವು ದಿನಗಳ ಕಾಲ ತಂಗಿದ್ದ ಮನೆ ಅಂದು ವಕೀಲ ಗೋರಖ್ ಪ್ರಸಾದ್ ಅವರಿಗೆ ಸೇರಿತ್ತು. ಆನಂತರ ಅದು ಮೂರು ಬಾರಿ ಮಾರಾಟವಾಗಿದೆ. ಆದರೆ ಇದರಿಂದ ತಲೆ ಕೆಡಿಸಿಕೊಳ್ಳದ ಬಿಹಾರ ಸರಕಾರವು ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ನಿರ್ಧರಿಸಿದೆ.

ಪಾಟ್ನಾದಲ್ಲಿರುವ ಗಾಂಧಿ ಸಂಗ್ರಹಾಲಯವು ಬಾಪುಗೆ ಅರ್ಪಿತ ಪ್ರತ್ಯೇಕ ಸಭಾಂಗಣವೊಂದನ್ನು ಹೊಂದಲಿದೆ ಎಂದೂ ನಿತೀಶ್ ತಿಳಿಸಿದರು. ಚಂಪಾರಣ್ ಸತ್ಯಾಗ್ರಹದ ನೂರನೇ ವರ್ಷಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪಿತನಿಗೆ ಬಿಹಾರ ಸರಕಾರದ ಗೌರವದ ರೂಪದಲ್ಲಿ ಈ ಪ್ರಕಟಣೆಗಳು ಹೊರಬಿದ್ದಿವೆ.

ಮನೆಯು ಈಗ ರೂಪಾಂತರಗೊಂಡಿದೆ. ಆದರೆ ಗಾಂಧೀಜಿಯವರು ಉಳಿದು ಕೊಂಡಿದ್ದ ಭಾಗ ಹಾಗೆಯೇ ಇದೆ. ಈ ಮನೆ ಮ್ಯೂಸಿಯಂ ಆಗಿ ಪರಿವರ್ತನೆಗೊಂಡರೆ ಅದು ನಮ್ಮ ಕುಟುಂಬದ ಪಾಲಿಗೆ ಗೌರವದ ವಿಷಯವಾಗುತ್ತದೆ ಎಂದು ಗೋರಖ್ ಪ್ರಸಾದ್ ಅವರ ಮರಿಮೊಮ್ಮಗಳು ಸ್ಮಿತಾ ಚಂದ್ರಮಣಿ ಕುಮಾರ್ ಹೇಳಿದರು.

ಈ ಮನೆ ದಶಕಗಳ ಕಾಲ ಯಾರದೇ ಗಮನಕ್ಕೆ ಬಂದಿರಲಿಲ್ಲ, ಆದರೆ ಚಂಪಾರಣ್ ಸತ್ಯಾಗ್ರಹದ ಶತಾಬ್ದಿ ಆಚರಣೆಯಿಂದಾಗಿ ಈಗ ಸುದ್ದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News