ಸಂಘ ಸಂಸ್ಥೆಗಳಿಂದ ಸಮಾಜಮುಖಿ ಕೆಲಸಗಳು ನಡೆಯಬೇಕು: ಅಬ್ದುಲ್ ರಶೀದ್ ಹಾಜಿ
ಉಳ್ಳಾಲ, ಎ.16: ಸಮಾಜದಲ್ಲಿ ಹಿಂದುಳಿದವರ ಸೇವೆಯೊಂದಿಗೆ ಸಮಾಜ ಸೇವೆಯಲ್ಲಿ ಸಂಘ ಸಂಸ್ಥೆಗಳು ತೊಡಗಿಸಿಕೊಂಡರೆ ಮಾದರಿ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಬೃಹತ್ ಸಂಸ್ಥೆಯಾಗಿ ಬೆಳೆಯುವ ಮೂಲಕ ಸೆಂಟ್ರಲ್ ಕಮಿಟಿ ಉಳ್ಳಾಲಕ್ಕೆ ಆಶ್ರಯವಾಗಿರಲಿ ಎಂದು ಸೈಯದ್ ಮದನಿ ದರ್ಗಾ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಅಭಿಪ್ರಾಯಪಟ್ಟರು.
ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್, ಫಿದಾ ಗೈಸ್ ಹಾಗೂ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಆಶ್ರಯದಲ್ಲಿ ಉಳ್ಳಾಲ ಮಾಸ್ತಿಕಟ್ಟೆಯ ಉಳ್ಳಾಲ ಸೆಂಟ್ರಲ್ ಕಮಿಟಿ ಕಚೇರಿಯಲ್ಲಿ ರವಿವಾರ ಜರಗಿದ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಇಂದು ವಿವಿಧ ದುಶ್ಚಟಗಳಿಂದ ಹಾದಿ ತಪ್ಪುತ್ತಿರುವ ಯುವಸಮುದಾಯಕ್ಕೆ ಉತ್ತಮ ಮಾರ್ಗದರ್ಶನದ ಅಗತ್ಯತೆ ಇದ್ದು, ಈ ನಿಟ್ಟಿನಲ್ಲಿ ಸೆಂಟ್ರಲ್ ಕಮಿಟಿ ಉತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಮಾದರಿಯಾಗಿದೆ. ಸಂಸ್ಥೆ, ಸಂಘಟನೆಗಳು ಹುಟ್ಟಿ ಸಾಯುತ್ತಲೇ ಇದೆ. ಈ ನಡುವೆ ಐದು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ಉಳ್ಳಾಲ ಸೆಂಟ್ರಲ್ ಕಮಿಟಿ ತೊಡಗಿಸಿಕೊಂಡು ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಳ್ಳಾಲ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅನ್ವರ್ ಹುಸೈನ್ ಮಾತನಾಡಿ, ಸೆಂಟ್ರಲ್ ಕಮಿಟಿ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬೆಳೆಯುತ್ತಿದ್ದು, ಇದೀಗ ರಕ್ತದಾನದ ಮೂಲಕ ತುರ್ತು ಅವಶ್ಯಕತೆಯಲ್ಲಿರುವ ಜನರಿಗೆ ಸಹಕರಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಬೃಹತ್ ಆಗಿ ಹಲವು ಯುನಿಟ್ ಗಳ ರಕ್ತ ಸಂಗ್ರಹಿಸಿ ಜನರಿಗೆ ಅನುಕೂಲವಾಗುವ ಸೇವೆಯನ್ನು ಕಮಿಟಿ ಯೋಜನೆ ರೂಪಿಸಿದೆ ಎಂದರು.
ಉಳ್ಳಾಲ ನಗರಸಭೆ ಅಧ್ಯಕ್ಷ ಕೆ.ಹುಸೈನ್ ಕುಂಞಿಮೋನು, ಉಳ್ಳಾಲ ನಗರಸಭೆ ಮಾಜಿ ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ, ಫಿದಾ ಗೈಸ್ ಮಂಚಿಲ ಇದರ ಗೌರವಾಧ್ಯಕ್ಷ ಮುಸ್ತಾಫಾ ಇಸ್ಮಾಯಿಲ್, ಅಹಮ್ಮದ್ ಬಾವ ಕುಂಬಳ ಮುಖ್ಯ ಅತಿಥಿಗಳಾಗಿದ್ದರು.
ಉಳ್ಳಾಲ ಸೆಂಟ್ರಲ್ ಕಮಿಟಿ ಜತೆ ಕಾರ್ಯದರ್ಶಿ ಎಚ್. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಸ್ವಾಗತಿಸಿದರು. ಉಳ್ಳಾಲ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಯು.ಕೆ.ಮಹಮ್ಮದ್ ಮುಸ್ತಾಫ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೆಕ್ಕಪರಿಶೋಧಕ ಅಹ್ಮದ್ ಬಾವಾ ಕೊಟ್ಟಾರ ವಂದಿಸಿದರು