×
Ad

ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯಿಂದ ಧರಣಿ

Update: 2017-04-17 13:00 IST

ಮಂಗಳೂರು, ಎ.17: ಕೊಣಾಜೆ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀಕಲಾ ಮೇಲೆ ದಾಖಲಾಗಿರುವ ವಿವಿಧ ಪ್ರಕರಣಗಳ ಕುರಿತಂತೆ ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ದಲಿತ ದಮನಿತ ಸ್ವಾಭಿಮಾನಿ ಹೋರಾಟ ಸಮಿತಿ ಇಂದು ಧರಣಿ ನಡೆಸಿತು.

ದ.ಕ. ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ನಡೆಸಿದ ಹೋರಾಟ ಸಮಿತಿಯು, ಪಿಎಸ್‌ಐ ಶ್ರೀಕಲಾ ಅವರು ಸಾರ್ವಜನಿಕ ವಲಯದಲ್ಲಿ ಅಯಮಾಕರ ಮೇಲೆ ದೌರ್ಜನ್ಯ ಎಸಗಿ ಪೊಲೀಸ್ ಇಲಾಖೆಗೆ ಕಳಂಕ ತಂದಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಪೊಲೀಸ್ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿತು. 
ಧರಣಿನಿರತನ್ನುದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಸಮಗ್ರ ದಲಿತ ಒಕ್ಕೂಟದ ಸಂಚಾಲಕ ಅಶೋಕ್ ಕೊಂಚಾಡಿ ಮಾತನಾಡಿ, ಶ್ರೀಕಲಾ ಅವರು ತಮ್ಮ ಸೇವಾವಧಿಯಲ್ಲಿ ದಕ್ಷತೆಯಲ್ಲಿ ಸೇವೆ ಮಾಡದೆ ದುರಂಹಕಾರ ಹಾಗೂ ಅಪ್ರಾಮಾಣಿಕತೆಯನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು.

ವಿನ್‌ಗೋಲ್ಡ್, ಎನಿಪೇ, ವಿಜಾರ್ ಎಂಬ ಕಂಪನಿಗಳಲ್ಲಿ ಅಮಾಯಕರು ದುಡ್ಜು ಹೂಡಿ ಮೋಸ ಹೋಗಿರುವ ಅವ್ಯವಹಾರದ ಜಾಲಕ್ಕೆ ಶ್ರೀಕಲಾ ಬೆನ್ನೆಲುಬಾಗಿ ನಿಂತಿದ್ದಾರೆ. ಮುಡಿಪುವಿನಲ್ಲಿ ಇತ್ತೀಚೆಗೆ ತರಕಾರಿ ಮಾರಾಟ ಮಾಡುತ್ತಿದ್ದ ದಲಿತ ರುಕ್ಮಯ್ಯ ಎಂಬವರನ್ನು ಠಾಣೆಗೆ ಕರೆದೊಯ್ದು ದೌರ್ಜನ್ಯ ನಡೆಸಿ ಬಳಿಕ ಅವರ ಮೇಲೆ ಗಾಂಜಾ ಪ್ರಕರಣದ ಅಪವಾದ ಹೊರಿಸುವ ಕೆಲಸವನ್ನೂ ಶ್ರೀಕಲಾ ಮಾಡಿದ್ದಾರೆ. ಇದಲ್ಲದೆ ಅಕ್ರಮ ಮರಳು ಸಾಗಾಟಗಾರರಿಂದ, ಉದ್ಯಮಿಗಳಿಂದ, ವ್ಯಾಪಾರಸ್ಥರಿಂದ ಮತ್ತು ಅಕ್ರಮ ಅಡ್ಡೆಗಳಿಂದ ಮಾಮೂಲಿ ಸಂಗ್ರಹಿಸುವ ಕೆಲಸವನ್ನು ಶ್ರೀಕಲಾ ಮಾಡುತ್ತಿದ್ದಾರೆ ಎಂದು ಅಶೋಕ್ ಕೊಂಚಾಡಿ ಆರೋಪಿಸಿದರು.

ಪ್ರತಿಭಟನೆಯ ಬಳಿಕ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಯಿತು.

ಶ್ರೀಕಲಾ ಮೇಲಿರುವ ಎಲ್ಲಾ ಪ್ರಕರಣಗಳನ್ನು ಮರು ತನಿಖೆಗೊಳಪಡಿಸಬೇಕು. ಶ್ರೀಕಲಾರ ಸಹಚರರನ್ನು ಬಂಧಿಸಿ ಸಮಗ್ರ ತಮನಿಖೆ ನಡೆಸಬೇಕು. ಇಲಾಖೆ ನೀಡಿರುವ ಅವರ ವೈಯಕ್ತಿಕ ಮೊಬೈಲ್ ವಶಪಡಿಸಿ ತನಿಖೆಗೊಳಪಡಿಬೇಕು. ರುಕ್ಮಯ್ಯನರ ಮೇಲಿನ ದೌರ್ಜನ್ಯ ಪ್ರಕರಣವನ್ನು ವಿಶೇಷ ತನಿಖೆಗೊಳಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಧರಣಿಯಲ್ಲಿ ಕಕೋಸೌವೇ ದ.ಕ. ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು, ಹೋರಾಟ ಸಮಿತಿಯ ಸಂಚಾಲಕ ರಘುವೀರ್ ಸೂಟರ್ ಪೇಟೆ, ಶಬೀರ್, ಶೇಖರ್ ಚಿಲಿಂಬಿ, ಹರ್ಷ ಕುಗ್ವೆ, ದಿನೇಶ್, ಈಶ್ವರ ಸೂಟರ್ ಪೇಟೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News