'ಅಝಾನ್' ವಿರುದ್ಧ ಸೋನು ನಿಗಮ್ ವಿವಾದಾತ್ಮಕ ಟ್ವೀಟ್
ಮುಂಬೈ, ಎ.17: ಮಸೀದಿಗಳಲ್ಲಿ ಮುಸ್ಲಿಮರಿಗೆ ಧ್ವನಿವರ್ಧಕಗಳ ಮುಖಾಂತರ ನೀಡಲಾಗುವ ಪ್ರಾರ್ಥನಾ ಕರೆ (ಅಝಾನ್) ವಿರೋಧಿಸಿ ಹಲವಾರು ಟ್ವೀಟುಗಳನ್ನು ಮಾಡಿ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. ಒಂದು ಟ್ವೀಟ್ ನಲ್ಲಂತೂ ಅವರು ಅಝಾನ್ ಅನ್ನು ಗೂಂಡಾಗಿರಿಗೂ ಹೋಲಿಸಿದ್ದಾರೆ.
ವೈರಲ್ ಆಗಿರುವ ಅವರ ಟ್ವೀಟುಗಳಲ್ಲಿ ಸೋನು ಹೀಗೆಂದಿದ್ದಾರೆ, ‘‘ದೇವರು ಎಲ್ಲರನ್ನೂ ಆಶೀರ್ವದಿಸಲಿ. ನಾನು ಮುಸ್ಲಿಮನಲ್ಲ ಆದರೂ ಬೆಳಿಗ್ಗೆ ಅಝಾನ್ ನಿಂದ ನನಗೆ ಎಚ್ಚರವಾಗುತ್ತದೆ. ಇಂತಹ ಬಲವಂತದ ಧಾರ್ಮಿಕತೆ ಭಾರತದಲ್ಲಿ ಯಾವಾಗ ಅಂತ್ಯವಾಗುವುದು? ಅಂದ ಹಾಗೆ ಇಸ್ಲಾಂ ಧರ್ಮವನ್ನು ಮುಹಮ್ಮದ್ ರಚಿಸಿದಾಗ ವಿದ್ಯುಚ್ಛಕ್ತಿ ಇರಲಿಲ್ಲ. ಎಡಿಸನ್ ನಂತರ ಈ ಕರ್ಕಶ ಸದ್ದು ಏಕೆ ಕೇಳಬೇಕಾಗಿದೆ?’’ ಎಂದು ಸೋನು ಪ್ರಶ್ನಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಕೊನೆಗೆ ಅಝಾನ್, 'ಗೂಂಡಾಗಿರಿಯಲ್ಲದೆ ಮತ್ತಿನ್ನೇನಲ್ಲ' ಎಂದೂ ಸೋನು ಹೇಳಿದ್ದಾರೆ.
‘‘ವಿದ್ಯುಚ್ಛಕ್ತಿ ಬಳಸಿ ಧರ್ಮವನ್ನು ಅನುಸರಿಸದ ಯಾರನ್ನೇ ಆದರೂ ಎಬ್ಬಿಸುವ ಪರಿಪಾಠ ಯಾವುದೇ ದೇವಸ್ಥಾನ ಅಥವಾ ಗುರುದ್ವಾರದಲ್ಲಿ ಇಲ್ಲ ಎಂದು ನನಗೆ ನಂಬಿಕೆಯಿದೆ. ಹಾಗಾದರೆ ಹೀಗೇಕೆ? ಇದು ಗೂಂಡಾಗಿರಿಯೇ ಹೌದು’’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟುಗಳಿಂದಾಗಿ ಸೋನು ಅವರಿಗೆ ಈಗ ಕೆಲವರು ‘ಕೋಮುವಾದಿ’ ಎಂಬ ಹಣೆಪಟ್ಟಿ ಹಚ್ಚಿದ್ದರೆ ಇನ್ನು ಕೆಲವರು ಅವರು ಕೇವಲ ತಮ್ಮ ನಿದ್ದೆಗೆಡಿಸುತ್ತಿರುವ ಬಗ್ಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅದೇ ಸಮಯ ಹಲವರು ಸೋನು ಅವರು ಭಾರೀ ಧೈರ್ಯ ತೋರಿಸಿದ್ದಾರೆ ಎಂದೂ ಟ್ವೀಟ್ ಮಾಡಿದ್ದಾರೆ.