ಪಿಲಿಕುಳದಲ್ಲಿ ದೇಶದ ಪ್ರಥಮ 3ಡಿ ಡಿಜಿಟಲ್ ತಾರಾಲಯ ಅಕ್ಟೋಬರ್‌ನಲ್ಲಿ ಅನಾವರಣ: ಶಾಸಕ ಲೋಬೊ
ಮಂಗಳೂರು, ಎ.17: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ನಿರ್ಮಾಣವಾಗಿರುವ 3ಡಿ ಡಿಜಿಟಲ್ ಹೈಬ್ರೀಡ್ ಸ್ವಾಮಿ ವಿವೇಕಾನಂದ ತಾರಾಲಯ ಅಕ್ಟೋಬರ್ ಕೊನೆಯಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದೆ ಎಂದು ಶಾಸಕ ಜೆ.ಆರ್. ಲೋಬೋ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 3ಡಿ 8ಕೆ ಡಿಜಿಟಲ್ ತಾರಾಲಯವನ್ನು ಹೊಂದಲಿರುವ ಭಾರತದ ಪ್ರಥಮ ನಗರ ಮಂಗಳೂರು ಆಗಲಿದೆ. ಈ ತೆರನಾದ ತಾರಾಲಯ ಪ್ರಸ್ತುತ ಸಿಂಗಾಪುರ, ಚೀನಾದ ಶಾಂೈ, ಯುಎಸ್‌ಎಯ ರಿಚ್‌ಮಂಡ್, ಕೊರಿಯಾದ ಆ್ಯನ್ಸ್‌ಯೊಂಗ್, ಕೆನಡಾದ ಕಾಲ್‌ಗೇರಿ, ಯುಕೆಯ ಬ್ರಿಸ್ಪಾಲ್, ಜರ್ಮನಿಯ ಹ್ಯಾಮ್‌ಬರ್ಗ್, ಜಪಾನ್‌ನ ಟೋಕಿಯೋ, ಪೋಲೆಂಡ್‌ನ ಲೋಡ್ಜ್ ನಗರಗಳಲ್ಲಿದೆ. ಇದೀಗ ಮಂಗಳೂರಿನಲ್ಲಿ ಈ ತಾರಾಲಯ ಉದ್ಘಾಟನೆಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಉನ್ನತ ತಾರಾಲಯವನ್ನು ಹೊಂದಿರುವ ದೇಶದ ಪ್ರಥಮ ನಗರವಾಗಿ ಮಂಗಳೂರು ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಳ್ಳಲಿದೆ ಎಂದರು.
ಪಿಲಿಕುಳ ನಿಸರ್ಗಧಾಮದ ವತಿಯಿಂದ ಆರಂಭದಲ್ಲಿ 8 ಕೋಟಿ ರೂ. ಯೋಜನಾ ವೆಚ್ಚದಲ್ಲಿ ತಾರಾಲಯ ನಿರ್ಮಾಣಕ್ಕೆ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಆದರೆ ಯೋಜನೆಯ ಬಗ್ಗೆ ಆರಂಭದಲ್ಲಿ ವಿಸ್ತೃತವಾದ ಮಾಹಿತಿ ಇಲ್ರಲಿಲ್ಲ. ಬಳಿಕ ಮಾಹಿತಿ ಕಲೆ ಹಾಕಿದಾದ 3ಡಿ ತಾರಾಲಯದ ನಿರ್ಮಾಣಕ್ಕೆ 15.50 ಕೋಟಿ ರೂ. ವೆಚ್ಚಕ್ಕೆ ವರದಿಯನ್ನು ಪರಷ್ಕರಿಸಲಾಯಿತು. ಇದಕ್ಕೂ ಸರಕಾರ ಒಪ್ಪಿಗೆ ಸೂಚಿಸಿತ್ತು. ಬಳಿಕ ತಾಂತ್ರಿಕ ಅಧ್ಯಯನಕ್ಕೆ ಹಾಗೂ ಯೋಜನಾ ವೆಚ್ಚ ಅಂತಿಮಗೊಳಿಸಲು ಬೆಂಗಳೂರಿನ ತಾರಾಲಯ ನಿರ್ದೇಶಕರಾದ ಡಾ. ಶುಕ್ರೆಯವರ ನೇತೃತ್ವದ ತಾಂತ್ರಿಕ ಸಮಿತಿ ರಚಿಸಲಾಯಿತು.
ಸಮಿತಿಯಲ್ಲಿ ಕೇರಳ ರಾಜ್ಯದ ವಿಜ್ಞಾನ ತಂತ್ರಜ್ಞಾನ ನಿರ್ದೇಶಕ ಡಾ. ಅರುಳ್ ಪ್ರಕಾಶ್, ತಮಿಳುನಾಡಿನ ಡಾ.ಐ.ಎಂ. ಪೆರುಆಳ್, ವಿಐಟಿಎಂ ಬೆಂಗಳೂರಿನ ನಿರ್ದೇಶಕ ಡಾ. ಶಿವಪ್ರಾಸದ್ ಕೆನೆದ್, ಪಿಲಿಕುಳನ ನಿಸರ್ಗಧಾಮದ ಡಾ.ಕೆ.ವಿ.ರಾವ್, ರಾಜ್ಯದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಡಾ. ಹೊನ್ನೇಗೌಡ ಹಾಗೂ ತನ್ನನ್ನು ಒಳಗೊಂಡ ಸಮಿತಿಯು ದೇಶದ ಹಲವು ತಾರಾಲಯಗಳನ್ನು ವೀಕ್ಷಿಸಿ, ತಜ್ಞರೊಂದಿಗೆ ಚರ್ಚಿಸಿ ರಾಷ್ಟ್ರದ ಮೊತ್ತ ಮೊದಲಿನ ಒಪ್ಟೋ ಮೆಕ್ಯಾನಿಕಲ್ ಮತ್ತು 3ಡಿ ಡಿಜಿಟಲ್ ಹೈಬ್ರೀಡ್ ವ್ಯವಸ್ಥೆಯ ತಾರಾಲಯ ನಿರ್ಮಾಣಕ್ಕೆ ಶಿಫಾರಸು ಮಾಡಿ 24.50 ಕೋಟಿ ರೂ. ಅಂದಾಜು ವೆಚ್ಚದ ವರದಿಯನ್ನು ಸರಕಾರಕ್ಕೆ ಸಲ್ಲಿಸಿ, ಮಂಜೂರಾತಿ ಪಡೆದು ಕಾಮಗಾರಿ ಆರಂಭಗೊಂಡಿತ್ತು. ಇದೀಗ ಮತ್ತೆ ಸುಮಾರು 10 ಕೋಟಿ ರೂ.ಗಳ ಹೆಚ್ಚುವರಿ ಅಂತಾರಾಷ್ಟ್ರೀಯ ಟೆಂಡರ್‌ನೊಂದಿಗೆ ಒಟ್ಟು 35.69 ಕೋಟಿ ರೂ.ಗಳಲ್ಲಿ ತಾರಾಲಯ ನಿರ್ಮಾಣವಾಗುತ್ತಿದೆ. ತಾರಾಲಯದಲ್ಲಿ ಇದೀಗ ಸ್ಪೇಸ್ ಗ್ಯಾಲರಿಯನ್ನೂ ಅಳವಡಿಸಲು ಯೋಜಿಸಲಾಗಿದೆ ಎಂದು ಶಾಸಕ ಜೆ.ಆರ್. ಲೋಬೋ ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ. ರಾವ್, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಪ್ರಕಾಶ್ ಸಾಲಿಯಾನ್, ಅರುಣ್ ಕುವೆಲ್ಲೋ, ಡೆನ್ನಿಸ್ ಲೋಬೋ ಮೊದಲಾದವರು ಉಪಸ್ಥಿತರಿದ್ದರು.