×
Ad

ಅಂಬೇಡ್ಕರ್ ಅವರ ಆದರ್ಶ, ಸಮಾಜಕ್ಕೆ ಮಾದರಿ: ಬಿ.ಎ.ಮೊಯ್ದಿನ್

Update: 2017-04-17 16:22 IST

ಮಂಗಳೂರು, ಎ.17: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿದ್ದು, ಸಮಾಜದ ಎಲ್ಲರೂ ಅದನ್ನು ಅನುಸರಿಸುವ ಕಾರ್ಯ ಮಾಡಬೇಕು ಎಂದು ಮಾಜಿ ಸಚಿವ ಬಿ.ಎ.ಮೊಯ್ದಿನ್ ಹೇಳಿದ್ದಾರೆ.

 ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೆ ಜನ್ಮ ದಿನಾಚರಣೆಯ ಪ್ರಯುಕ್ತ ನಗರದ ಪುರಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಲಾದ ಪ್ರಜಾಪ್ರಭುತ್ವ ಪುನರುತ್ಥಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ಶೋಷಿತ ಸಮಾಜವನ್ನು ಮುಖ್ಯವಾಹಿನಿಗೆ ತರುವ ಮಹತ್ತರ ಕಾರ್ಯವನ್ನು ಮಾಡಿದವರು ಎಂದರು.

ಡಾ.ಅಂಬೇಡ್ಕರ್ ಯಾವುದೇ ಒಂದು ಜಾತಿಗೆ ಸೀಮಿತರಾದವರಲ್ಲ. ಅವರು ಸಮಸ್ತ ಸಮಾಜಕ್ಕೆ ಬೇಕಾದವರು. ಜಾತಿ ಸಂಘರ್ಷ, ವೌಢ್ಯಗಳಿಂದ ಶೋಷಣೆಗೊಳಗಾದವರ ವಿರುದ್ದ ಧ್ವನಿ ಎತ್ತುವ ಜತೆಯಲ್ಲೇ ವಿದೇಶದಲ್ಲಿ ಉನ್ನತ ವ್ಯಾಸಂಗದ ಮೂಲಕ ಅಧ್ಯಯನ ಮಾಡಿದವರು. ಅವರೊಬ್ಬ ಪತ್ರಿಕೋದ್ಯಮಿ, ಸಮಾಜವಾದಿ, ಆರ್ಥಿಕವಾದಿಯೂ ಹೌದು ಎಂದು ಅವರು ವಿಶ್ಲೇಷಿಸಿದರು.

ದಸಂಸನ ರಾಜ್ಯ ಸಂಚಾಲಕ ಎಂ.ಸೋಮಶೋಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ದಸಂಸ ಜಿಲ್ಲಾ ಶಾಖೆಯ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರು ವಹಿಸಿದ್ದರು. ಕಾರ್ಯಕ್ರಮದಲ್ಲಿ ದಸಂಸನ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಂದಾನಿ ಸೋಮನಹಳ್ಳಿ, ಪದ್ಮ ವೇಣೂರು ಉಪಸ್ಥಿತರಿದ್ದರು. ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಸಮಾರಂಭಕ್ಕೆ ಮೊದಲು ನಗರದ ಬಾವುಟಗುಡ್ಡೆಯಿಂದ ಪುರಭವನದವರೆಗೆ ಜನ ಕಲಾಮೇಳ ಜಾಥ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News