ದೇಶದ ಅತ್ಯಂತ ಕಿರಿಯ ಸಂಸದನಿಗೆ ಕಂಕಣ ಭಾಗ್ಯ
ಚಂಡಿಗಡ, ಎ. 17: ಭಾರತದ ಅತಿ ಚಿಕ್ಕ ವಯಸ್ಸಿನ ಸಂಸದ ದುಷ್ಯಂತ್ ಚೌತಾಲ ಎಪ್ರಿಲ್ ಹದಿನೆಂಟಕ್ಕೆ ಮದುವೆಯಾಗಲಿದ್ದಾರೆ. ಗುರುಗ್ರಾಮದಲ್ಲಿ ಮದುವೆ ನಡೆಯಲಿದೆ. ಹರಿಯಾಣ ಪೊಲೀಸ್‌ನ ಐಪಿಎಸ್ ಅಧಿಕಾರಿ ಪರಂಜಿತ್ ಸಿಂಗ್ ಅಹ್ಲಾವತ್‌ರ ಪುತ್ರಿ ಮೇಘನಾರನ್ನು ದುಷ್ಯಂತ್ ಬಾಳಸಖಿಯಾಗಿ ಸ್ವೀಕರಿಸಲಿದ್ದಾರೆ. ಭಾರತೀಯ ರಾಷ್ಟ್ರೀಯ ಲೋಕದಳ ನಾಯಕ ಹರಿಯಾಣದ ಮಾಜಿಮುಖ್ಯಮಂತ್ರಿ ಓಂಪ್ರಕಾಶ್ ಚೌತಾಲರ ಮೊಮ್ಮಗ ದುಷ್ಯಂತ್, ಹಿಸ್ಸಾರ್ ಲೋಕಸಭಾ ಸ್ಥಾನದಿಂದ ಅವರು ವಿಜಯಿಯಾಗಿದ್ದಾರೆ.
29 ವರ್ಷದ ದುಷ್ಯಂತ್ ತನ್ನ 26ನೆ ವಯಸ್ಸಿನಲ್ಲಿ ಸಂಸದ ಆಗಿದ್ದರು. ಹರಿಯಾಣ ಜನಹಿತ ಕಾಂಗ್ರೆಸ್‌ನ ಅಭ್ಯರ್ಥಿ ಕುಲ್‌ದೀಪ್ ಬಿಷ್ಣೋಯಿಯವರನ್ನು ಸೋಲಿಸಿದ್ದರು. ತಂದೆ ಅಜಯ್ ಸಿಂಗ್ ಚೌತಾಲ ಮಾಜಿ ಶಾಸಕರಾಗಿದ್ದಾರೆ. ತಾಯಿ ನೈನಾ ಸಿಂಗ್ ಚೌತಾಲ ಸಿರ್ಸಾ ಜಿಲ್ಲೆಯ ದಾಬ್ವಾಲಿ ವಿಧಾನಸಭೆಯ ಸದಸ್ಯರು ಆಗಿದ್ದಾರೆ.
ತಂದೆ ಅಜಯ್ ಸಿಂಗ್ ಚೌತಾಲ, ಅಜ್ಜ ಓಂಪ್ರಕಾಶ್ ಚೌತಾಲ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜೈಲುಪಾಲಾದ್ದರಿಂದ 2013ರಲ್ಲಿ ದುಷ್ಯಂತ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ್ದರು.