ಖುರೇಷಿಯ ಆರೋಗ್ಯ ಸ್ಥಿರ: ವದಂತಿ ಹಬ್ಬುವವರ ವಿರುದ್ಧ ಕ್ರಮ; ಪೊಲೀಸ್ ಆಯುಕ್ತ ಚಂದ್ರಶೇಖರ್
ಮಂಗಳೂರು, ಎ.17: ನ್ಯಾಯಾಲಯದ ಆದೇಶದಂತೆ ಇದೀಗ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಹ್ಮದ್ ಖುರೇಷಿಯ ಆರೋಗ್ಯ ಸ್ಥಿರವಾಗಿದೆ. ಈ ಮಧ್ಯೆ ಆತನ ಆರೋಗ್ಯ ಹದಗೆಟ್ಟಿದೆ, ಇತ್ಯಾದಿಯಾಗಿ ಸಾಮಾಜಿಕ ಜಾಲತಾಣ ಮತ್ತಿತರ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬುವವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ಎಚ್ಚರಿಸಿದ್ದಾರೆ.
ಸೋಮವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹ್ಮದ್ ಖುರೇಷಿಯ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಲಾಗುತ್ತಿದೆ. ಆತನ ಆರೋಗ್ಯ ಸ್ಥಿರವಾಗಿದೆ. ಆದರೂ ಖಾಸಗಿ ಚಾನೆಲ್‌ವೊಂದರ ಲೋಗೊ ಬಳಸಿ ಆತನ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ ಎಂದು ವದಂತಿ ಹಬ್ಬಲಾಗುತ್ತಿದೆ. ಇದನ್ನು ಯಾರು ಮಾಡಿದ್ದಾರೆ, ಯಾರೆಲ್ಲಾ ಇದರ ಹಿಂದೆ ಇದ್ದಾರೆ ಎಂಬುದು ಮಾಹಿತಿ ಕಲೆ ಹಾಕಲಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದೇ ಈ ಕಿಡಿಗೇಡಿಗಳ ಉದ್ದೇಶವಾಗಿದೆ ಎಂದರು.
ರವಿವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಅಹ್ಮದ್ ಖುರೇಷಿ ಬೆಡ್ ಮೇಲೆ ಮಲಗಿರುವ ಮತ್ತು ಊಟ ಮಾಡುವ ದೃಶ್ಯವನ್ನು ಪತ್ರಕರ್ತರಿಗೆ ಪ್ರದರ್ಶಿಸಿದ ಪೊಲೀಸ್ ಆಯುಕ್ತ ಚಂದ್ರಶೇಖರ್, ಇದು ವಸ್ತುಸ್ಥಿತಿ. ಆದರೂ ಕಿಡಿಗೇಡಿಗಳು ಆತನ ಆರೋಗ್ಯ ಸ್ಥಿರವಾಗಿಲ್ಲ ಎಂದು ಸುಳ್ಳು ಸುದ್ದಿ ಹಬ್ಬುತ್ತಿದ್ದಾರೆ ಎಂದರು.
ಸಿಐಡಿ ತನಿಖೆಗೆ ಆದೇಶ: ಅಹ್ಮದ್ ಖುರೇಷಿ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯದ ಬಗ್ಗೆ ಸಿಐಡಿ ತನಿಖೆಗೆ ರಾಜ್ಯ ಸರಕಾರ ಆದೇಶಿಸಿದೆ. ಡಿಸಿಪಿ ಶಾಂತರಾಜು ನೇತೃತ್ವದ ತಂಡ ಪ್ರತ್ಯೇಕ ತನಿಖೆ ನಡೆಸುತ್ತಿದ್ದು, ಸಿಐಡಿ ತಂಡಕ್ಕೂ ಇಲಾಖೆ ಸಹಕರಿಸಲಿದೆ ಎಂದು ಪೊಲೀಸ್ ಆಯುಕ್ತ ಚಂದ್ರಶೇಖರ್ ತಿಳಿಸಿದರು.
ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ: ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಕಮಿಷನರ್ ಕಚೇರಿಯಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಅಹ್ಮದ್ ಖುರೇಷಿ ಪ್ರಕರಣದ ಬಗ್ಗೆ ಚರ್ಚೆ ನಡೆದಿದ್ದು, ಪೊಲೀಸ್ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು. ಸಭೆಯಲ್ಲಿ ಸಚಿವ ಯು.ಟಿ.ಖಾದರ್, ಶಾಸಕ ಬಿ.ಎ.ಮೊಯ್ದಿನ್ ಬಾವ ಮತ್ತಿತರರಿದ್ದರು.