ಯಶಸ್ವಿನಿ ಯೋಜನೆಯ ವೈದ್ಯಕೀಯ ವೆಚ್ಚ ಮಿತಿ ರದ್ದು: ಸಚಿವ ಪ್ರಮೋದ್
ಬ್ರಹ್ಮಾವರ, ಎ.17: "ಯಶಸ್ವಿನಿ" ಯೋಜನೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ನೀಡುತ್ತಿರುವ 2 ಲಕ್ಷ ರೂ.ಗಳವರೆಗಿನ ಮಿತಿಯನ್ನು ಸರಕಾರ ರದ್ದುಗೊಳಿಸಲು ನಿರ್ಧರಿಸಿದ್ದು, ಇನ್ನು ಮುಂದೆ "ಯಶಸ್ವಿನಿ" ಯೋಜನೆಯಡಿ ಪಡೆಯುವ ಚಿಕಿತ್ಸೆ ಸಂಪೂರ್ಣ ಉಚಿತವಾಗಲಿದೆ. ಇದಕ್ಕೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ ಎಂದು ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ
ಸೋಮವಾರ ಬ್ರಹ್ಮಾವರದಲ್ಲಿ ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಆಡಳಿತಕ್ಕೆ ಬಂದ ನಂತರ, 8 ವರ್ಷಗಳಿಂದ ನೇಮಕಾತಿ ಆಗದೆ ಉಳಿದಿದ್ದ ವೈದ್ಯರು, ತಜ್ಞವೈದ್ಯರು, ನರ್ಸ್ ಗಳು ಹಾಗೂ ತಾಂತ್ರಿಕ ಸಿಬ್ಬಂದಿಯ ನೇಮಕಾತಿ ನಡೆಸಿದ್ದು, ಇದರಿಂದ ಹಲವು ವರ್ಷಗಳಿಂದ ಖಾಲಿ ಇದ್ದ ವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನು ನೀಗಿಸಲಾಗಿದೆ. ನಾಗರಿಕರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ಸಾಧ್ಯ ವಾಗಿದೆ ಎಂದವರು ವಿವರಿಸಿದರು.
ಈ ಬಾರಿಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ 1,000ರೂ. ಗೌರವ ಧನ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಜೆನರಿಕ್ ಔಷಧ ಕೇಂದ್ರಗಳನ್ನು ತೆರೆದಿದ್ದು, ಇಲ್ಲಿ ಮಾರುಕಟ್ಟೆ ಬೆಲೆಗಿಂತ ಶೇ.90 ರಿಯಾಯತಿ ದರದಲ್ಲಿ ಔಷಧಗಳು ಲಭ್ಯವಾಗುತ್ತಿವೆ. ಅಲ್ಲದೇ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಸೇವೆ ಒದಗಿಸುವ ಚಿಂತನೆ ಇದೆ ಎಂದು ಸಚಿವರು ತಿಳಿಸಿದರು.
ಬಹ್ಮಾವರದಲ್ಲಿ 30 ಹಾಸಿಗೆಗಳ ಸಾಮರ್ಥ್ಯದ 9.36 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಘಟಕ, ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಎಕ್ಸ್‌ರೇ ಕೊಠಡಿ, ಪ್ರಯೋಗಾಲಯ ಮಾತ್ರವಲ್ಲದೇ, ಸೋಲಾರ್ ಬಿಸಿ ನೀರಿನ ವ್ಯವಸ್ಥೆ, ಕೋಲ್ಡ್ ಸ್ಟೋರೇಜ್ ಹೊಂದಿರುವ ಶವಾಗಾರ, ಬೋರ್‌ವೆಲ್, ಮಳೆ ನೀರು ಇಂಗಿಸುವ ವ್ಯವಸ್ಥೆ ಇರಲಿದೆ. ವೈದ್ಯರು, ದಾದಿಯರು ಹಾಗೂ ಡಿ ಗ್ರೂಪ್ ಸಿಬ್ಬಂದಿಗಾಗಿ 16 ವಸತಿಗೃಹ ನಿರ್ಮಾಣ ಆಗಲಿದ್ದು, 12 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪ್ರಮೋದ್ ನುಡಿದರು.
ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನಿತ್ಯಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಜನಾರ್ದನ ತೋನ್ಸೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಸದಸ್ಯ ದಿನಕರ ಪೂಜಾರಿ, ಸುಧೀರ್‌ಕುಮಾರ್ ಶೆಟ್ಟಿ, ಡಾ. ಸುನೀತಾ ಶೆಟ್ಟಿ, ವಸಂತಿ ಪೂಜಾರಿ, ಕುಸುಮ ಪೂಜಾರಿ, ಚಾಂತಾರು ಗ್ರಾಪಂ ಅಧ್ಯಕ್ಷೆ ಸರಸ್ವತಿ, ಹಾರಾಡಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಎ ಶೆಟ್ಟಿ, ಹಂದಾಡಿ ಗ್ರಾಪಂ ಅಧ್ಯಕ್ಷೆ ಪ್ರತಿಮಾ ಶೆಟ್ಟಿ, ಕೆಡಿಪಿ ಸದಸ್ಯ ಉಮೇಶ್ ನಾಯ್ಕಿ, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಸ್ವಾಗತಿಸಿದರು