×
Ad

ಕರಾವಳಿಯಲ್ಲಿ ರಾಜಕೀಯ ಪ್ರೇರಿತ ಭಯೋತ್ಪಾದನೆ: ಕುಮಾರಸ್ವಾಮಿ

Update: 2017-04-17 19:39 IST

ಮಂಗಳೂರು, ಎ.17: ಕರಾವಳಿಯಲ್ಲಿ ರಾಜಕೀಯ ಪ್ರೇರಿತ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದ್ದು, ಅದಕ್ಕೆ ಅಂತ್ಯ ಹಾಡಲು ಜೆಡಿಎಸ್ ಬದ್ಧವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇರಳ ರಾಜ್ಯದ ಮುಖ್ಯಮಂತ್ರಿ ಕರಾವಳಿಗೆ ಆಗಮಿಸಿದ ಸಂದರ್ಭ ಅವರಿಗೆ ತಡೆಯೊಡ್ಡಲಾಯಿತು.ಇದೀಗ ಪೊಲೀಸರಿಂದಲೇ ದೌರ್ಜನ್ಯ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಕೃತ್ಯ ರಾಜ್ಯದಲ್ಲಿ ಇತರ ಕಡೆಗಿಂತ ಹೆಚ್ಚಾಗಿ ಕರಾವಳಿಯಲ್ಲಿ ನಡೆಯುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳು ವಿಫಲವಾಗಿವೆ. ಈ ರೀತಿ ರಾಜಕೀಯ ಭಯೋತ್ಪಾದನೆಯನ್ನು ಆರಂಭದಲ್ಲಿಯೇ ಚಿವುಟಿ ಹಾಕದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯಕ್ಕೆ ಅರ್ಥವಿರುವುದಿಲ್ಲ ಎಂದು ಕುಮಾರ ಸ್ವಾಮಿ ಹೇಳಿದರು.

ಬಿಜೆಪಿಗರಿಗೆ ಮಾತ್ರ ಅಚ್ಛೇ ದಿನ್: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅಚ್ಛೇ ದಿನ್ ಬರುತ್ತಿದೆ ಎಂಬ ಹೇಳಿಕೆಯನ್ನು ನೀಡಿದೆ. ಅದು ಬಿಜೆಪಿ ಪಕ್ಷದವರಿಗೆ ಮಾತ್ರ ಅಚ್ಛೇ ದಿನ್ ಸೀಮಿತವಾಗಿದೆ ಹೊರತು ದೇಶದ ಉಳಿದ ಜನರಿಗಲ್ಲ ಎನ್ನುವುದು ಸಾಬೀತಾಗಿದೆ. ನೋಟು ಅಮಾನ್ಯಗೊಳಿಸಿದ ಬಳಿಕ ಕಪ್ಪು ಹಣ ಸಂಗ್ರಹಿಸುತ್ತೇವೆ ಎಂದು ಹೇಳಿದ ಮೋದಿ ಎಷ್ಟು ಹಣ ಸಂಗ್ರಹಿಸಿದ್ದೇವೆ ಎಂದು ಜನರ ಮುಂದೆ ಇದುವರೆಗೂ ಬಹಿರಂಗ ಪಡಿಸಿಲ್ಲ. ಶ್ರೀಮಂತರ ಬದಲು ಬಡವರು ಎಟಿಎಂ ಎದುರು ತಮ್ಮ ಹಣಕ್ಕಾಗಿ ಕಾದು ಹಲವರು ಮೃತಪಟ್ಟಿದ್ದಾರೆ. ದೇಶದಲ್ಲಿ ಮೋದಿಯ ಆಡಳಿತ ಜರ್ಮನಿಯ ಹಿಟ್ಲರ್ ಆಡಳಿತದ ರೀತಿಯಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಹೊರತು ಪಡಿಸಿದರೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾದ ಮಂಗಳೂರಿನ ಅಭಿವೃದ್ಧಿಗೆ ಇಲ್ಲಿನ ಅಹಿತಕರ ಚಟುವಟಿಕೆಗಳು ಅಡ್ಡಿಯಾಗುತ್ತಿವೆ ಎಂದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಕುಮಾರ ಸ್ವಾಮಿ ತಿಳಿಸಿದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News