×
Ad

ಮಳವೂರು ಅಣೆಕಟ್ಟು ಬಳಿ ಅಕ್ರಮ ಮರಳುಗಾರಿಕೆ ಆರೋಪ: ನಿಷೇಧಕ್ಕೆ ಆಗ್ರಹ

Update: 2017-04-17 20:15 IST

ಮಂಗಳೂರು, ಎ.17: ಕುಡಿಯುವ ನೀರಿನ ಉದ್ದೇಶಕ್ಕೆ ನಿರ್ಮಿಸಿರುವ ಮಳವೂರು ಅಣೆಕಟ್ಟು ಎ.18ರಂದು ಉದ್ಘಾಟನೆಗೊಳ್ಳುತ್ತಿದ್ದು, ಇಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಆರೋಪವು ಮಂಗಳೂರು ತಾಪಂ ನ ಸಾಮಾನ್ಯ ಸಭೆಯಲ್ಲಿಂದು ಕೇಳಿ ಬಂತು.

ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ, ಸದಸ್ಯರು ಮಳವೂರು ಅಣೆಕಟ್ಟು ಬಳಿ ಅಕ್ರಮ ಮರಳುಗಾರಿಕೆ ನಿಷೇಧಿಸಬೇಕೆಂದು ಆಗ್ರಹಿಸಿದರು.

ಮರಳುಗಾರಿಕೆಯನ್ನು ತಡೆಯದೇ ಇದ್ದಲ್ಲಿ ಡ್ಯಾಂನ ತಡೆಗೋಡೆ ಕುಸಿಯಬಹುದು. ಇದರಿಂದ ಸುಮಾರು 45 ಕೋ.ರೂ.ಅನುದಾನ ನೀರು ಪಾಲಾಗಬಹುದು ಎಂಬ ಆತಂಕವೂ ಸದಸ್ಯರಿಂದ ವ್ಯಕ್ತವಾಯಿತು.

ಸದಸ್ಯೆ ವಜ್ರಾಕ್ಷಿ ಪಿ.ಶೆಟ್ಟಿ ಮಾತನಾಡಿ, ಮಧ್ಯ ಸಂಕದಡಿಯಲ್ಲಿ ಪಂಜ, ಕಿನ್ನಿಗೋಳಿ ಸಂಪರ್ಕಕ್ಕೆ ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ಕಿಂಡಿ ಅಣೆಕಟ್ಟನ್ನೂ ನಿರ್ಮಿಸುವುದಾಗಿ ಶಾಸಕರು ತಿಳಿಸಿದ್ದಾರೆ. ಆದರೆ ಈ ಕಾಮಗಾರಿ ಆಗುವವರೆಗೆ ಮಳವೂರು ಡ್ಯಾಂನಿಂದ ಚೇಳ್ಯಾರು ಗ್ರಾಮಕ್ಕೆ ಕುಡಿಯುವ ನೀರು ಕೊಡಬೇಕು ಎಂದು ಒತ್ತಾಯಿಸಿದರು.

ತಾ.ಪಂ.ಸಾಮಾನ್ಯ ಸಭೆಯಲ್ಲಿ ತಹಶೀಲ್ದಾರ್ ಗೈರು ಹಾಜರಾಗಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಸರ್ವೇಯರ್, ಕಂದಾಯ ನಿರೀಕ್ಷಕರ ಗೈರು ಹಾಜರಾತಿಗೂ ಸಭೆಯಲ್ಲಿ ಆಕ್ಷೇಪ ಕೇಳಿ ಬಂತು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ವಿತರಣಾ ಸಮಾರಂಭಕ್ಕೆ ಅಡ್ಯಾರ್, ನೀರುಮಾರ್ಗ ಹಾಗೂ ಉಳಾಯಿಬೆಟ್ಟು ಕ್ಷೇತ್ರಗಳ ಸದಸ್ಯರನ್ನು ಆಹ್ವಾನಿಸಿಲ್ಲ ಎಂದು ಸದಸ್ಯ ಶ್ರೀಧರ್ ಆಕ್ಷೇಪ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್, ಸ್ಥಾಯಿ ಸಮಿತಿಯ ಅಧ್ಯಕ್ಷೆ ರೀಟಾ ಕುಟಿನ್ಹಾ ಉಪಸ್ಥಿತರಿದ್ದರು.

ಪ್ರತೀ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆಯಾ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ನೀಡಿರುವ ಪಟ್ಟಿ ಆಧರಿಸಿ ಪ್ರತಿ ಶನಿವಾರ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ .

ನೀರಿನ ಕೊರತೆ ನೀಗಿಸಲು ಟಾಸ್ಕ್‌ಪೋರ್ಸ್ ಸೇರಿದಂತೆ ವಿವಿಧ ಅನುದಾನದಲ್ಲಿ ಕೊಳವೆಬಾವಿ ಇನ್ನಿತರ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ನೀರಿನ ಸಮಸ್ಯೆ ಕುರಿತು ಚರ್ಚಿಸಲಾಗುವುದು ಎಂದು ಅವರು ಹೇಳಿದರು.

        ತಾಪಂ ಕಾರ್ಯನಿರ್ವಹಣಾಧಿಕಾರಿ, ಜಿ.ಸದಾನಂದ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News