×
Ad

ಇಸ್ರೇಲ್ ಜೈಲಲ್ಲಿರುವ ಫೆಲೆಸ್ತೀನೀಯರಿಂದ ಸಾಮೂಹಿಕ ಉಪವಾಸ ಸತ್ಯಾಗ್ರಹ

Update: 2017-04-17 20:32 IST

ರಮಲ್ಲಾ (ಫೆಲೆಸ್ತೀನ್), ಎ. 17: ಇಸ್ರೇಲ್‌ನ ಜೈಲುಗಳಲ್ಲಿರುವ ನೂರಾರು ಫೆಲೆಸ್ತೀನಿ ಕೈದಿಗಳು ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ಫೆಲೆಸ್ತೀನ್ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು. ಉಪವಾಸ ಸತ್ಯಾಗ್ರಹದ ನೇತೃತ್ವವನ್ನು ಕೈದಿ ಮರ್ವನ್ ಬರ್ಗೌತಿ ವಹಿಸಿದ್ದಾರೆ.

ಸುಮಾರು 1,300 ಫೆಲೆಸ್ತೀನಿ ಕೈದಿಗಳು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಹಾಗೂ ಈ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಫೆಲೆಸ್ತೀನ್ ಪ್ರಾಧಿಕಾರದ ಕೈದಿಗಳ ವ್ಯವಹಾರದ ಮುಖ್ಯಸ್ಥ ಇಸ್ಸ ಕರಾಕೆ ತಿಳಿಸಿದರು.

1,500 ಕೈದಿಗಳು ಭಾಗವಹಿಸುತ್ತಿದ್ದಾರೆ ಎಂದು ಫೆಲೆಸ್ತೀನಿಯನ್ ಕೈದಿಗಳ ಕ್ಲಬ್ ಎಂಬ ಹೆಸರಿನ ಸಂಸ್ಥೆ ಹೇಳಿದೆ. ತಾವು ಉಪವಾಸ ಸತ್ಯಾಗ್ರಹ ಮಾಡುವುದಾಗಿ 700 ಕೈದಿಗಳು ರವಿವಾರ ಘೋಷಿಸಿದ್ದಾರೆ ಎಂದು ಇಸ್ರೇಲ್‌ನ ಕಾರಾಗ್ರಹ ಇಲಾಖೆಯ ವಕ್ತಾರ ಅಸ್ಸಫ್ ಲಿಬ್ರಟಿ ಹೇಳಿದರು.

‘‘ಎಷ್ಟು ಮಂದಿ ಕೈದಿಗಳು ಉಪವಾಸ ಮಾಡುತ್ತಿದ್ದಾರೆ ಎಂಬುದನ್ನು ನಾವೀಗ ಪರಿಶೀಲಿಸುತ್ತಿದ್ದೇವೆ. ತಾವು ಕೇವಲ ಸಾಂಕೇತಿಕ ಮುಷ್ಕರ ನಡೆಸಿ ತಿನ್ನುವುದನ್ನು ಮುಂದುವರಿಸುತ್ತೇವೆ ಎಂದು ಕೆಲವು ಕೈದಿಗಳು ಹೇಳಿದ್ದಾರೆ’’ ಎಂದರು.

ಎರಡನೆ ಫೆಲೆಸ್ತೀನ್ ‘ಇಂಟಿಫಾಡ’ (ಬಂಡಾಯ)ದಲ್ಲಿ ಭಾಗವಹಿಸಿರುವುದಕ್ಕಾಗಿ ಬರ್ಗೌತಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಅವರು ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಅವರಿಗೆ ಫೆಲೆಸ್ತೀನ್ ಅಧ್ಯಕ್ಷರಾಗುವಷ್ಟು ಜನಬೆಂಬಲವಿದೆ ಎಂದು ಸಮೀಕ್ಷೆಗಳು ಹೇಳುತ್ತವೆ.

ಪ್ರತಿ ವರ್ಷ ಆಚರಿಸಲಾಗುವ ಫೆಲೆಸ್ತೀನ್ ಕೈದಿಗಳ ದಿನದ ಭಾಗವಾಗಿ ಉಪವಾಸ ಸತ್ಯಾಗ್ರಹವನ್ನು ಆಚರಿಸಲಾಗುತ್ತಿದೆ. ಇಸ್ರೇಲ್‌ನ ಜೈಲುಗಳಲ್ಲಿ ಈಗ ಸುಮಾರು 6,500 ಫೆಲೆಸ್ತೀನೀಯರಿದ್ದಾರೆ.

ಕೈದಿಗಳ ಬೇಡಿಕೆಗಳು

ತಮ್ಮ ಕುಟುಂಬ ಸದಸ್ಯರ ಭೇಟಿಯನ್ನು ಸುಲಭಗೊಳಿಸಬೇಕು ಮತ್ತು ಹೆಚ್ಚು ಸಲ ಭೇಟಿಯಾಗಲು ಅವಕಾಶ ನೀಡಬೇಕು ಹಾಗೂ ತಮಗೆ ಟೆಲಿಫೋನ್ ಸಂಪರ್ಕಗಳನ್ನು ಒದಗಿಸಬೇಕು ಎನ್ನುವುದು ಉಪವಾಸ ನಿರತ ಫೆಲೆಸ್ತೀನ್ ಕೈದಿಗಳ ಪ್ರಮುಖ ಬೇಡಿಕೆಯಾಗಿದೆ.ಜೊತೆಗೆ, ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂಬುದಾಗಿಯೂ ಅವರು ಆಗ್ರಹಿಸುತ್ತಾರೆ.

ಕೈದಿಗಳು ಎರಡು ವಾರಗಳಿಗೊಮ್ಮೆ ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಗಬೇಕು ಎಂಬುದಾಗಿ ಇಸ್ರೇಲ್ ಜೈಲುಗಳ ನಿಯಮಗಳು ಹೇಳುತ್ತವೆಯಾದರೂ, ವಾಸ್ತವ ಇದಕ್ಕಿಂತ ತೀರಾ ಭಿನ್ನವಾಗಿದೆ.

ಇಸ್ರೇಲ್ ಆಕ್ರಮಿತ ಫೆಲೆಸ್ತೀನ್‌ನಲ್ಲಿ ವಾಸಿಸುತ್ತಿರುವ ಕುಟುಂಬ ಸದಸ್ಯರು ಇಸ್ರೇಲ್‌ನ ಜೈಲುಗಳಲ್ಲಿರುವ ತಮ್ಮ ಕುಟುಂಬ ಸದಸ್ಯರನ್ನು ನೋಡಬೇಕಾದರೆ, ಮೊದಲು ಅವರು ಇಸ್ರೇಲ್‌ಗೆ ಪ್ರವೇಶಿಸುವ ಅನುಮತಿ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಇಂಥ ಅರ್ಜಿಗಳನ್ನು ಇಸ್ರೇಲ್ ಅಧಿಕಾರಿಗಳು ಹೆಚ್ಚಿನ ಸಂದರ್ಭಗಳಲ್ಲಿ ತಿರಸ್ಕರಿಸುತ್ತಾರೆ.

ಎರಡು ವರ್ಷಗಳಿಂದ ಕುಟುಂಬ ಸದಸ್ಯರನ್ನು ಭೇಟಿಯಾಗದಿರುವ ಕೈದಿಗಳು ಇಸ್ರೇಲ್‌ನ ಜೈಲುಗಳಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News