ಟರ್ಕಿ : ಅಧ್ಯಕ್ಷರಿಗೆ ಪರಮಾಧಿಕಾರ ಪರ ಮತ
Update: 2017-04-17 20:38 IST
ಅಂಕಾರ (ಟರ್ಕಿ), ಎ. 17: ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರಗಳನ್ನು ನೀಡಬೇಕೇ, ಬೇಡವೇ ಎಂಬ ಬಗ್ಗೆ ಟರ್ಕಿಯಲ್ಲಿ ರವಿವಾರ ನಡೆದ ಜನಮತಗಣನೆಯಲ್ಲಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ತೀರಾ ಕಡಿಮೆ ಅಂತರದ ಜಯ ಗಳಿಸಿದ್ದಾರೆ.
ಈ ಜನಮತಗಣನೆಯು ದೇಶ ಮಾನಸಿಕವಾಗಿ ಇಬ್ಭಾಗವಾಗಿರುವುದನ್ನು ತೋರಿಸಿದೆ ಹಾಗೂ ಪ್ರತಿಪಕ್ಷಗಳು ಸರಕಾರದ ವಿರುದ್ಧ ಮುಗಿಬಿದ್ದಿವೆ.
ಜನಮತಗಣನೆಯು ಸಂವಿಧಾನ ತಿದ್ದುಪಡಿಗೆ ಅನುಮೋದನೆ ನೀಡಿದೆ. ತಿದ್ದುಪಡಿಯ ಪ್ರಕಾರ, ದೇಶದಲ್ಲಿ ಅಧ್ಯಕ್ಷೀಯ ವ್ಯವಸ್ಥೆ ಜಾರಿಗೆ ಬರಲಿದೆ ಹಾಗೂ ಎರ್ದೊಗಾನ್ ಗರಿಷ್ಠ ಅಧಿಕಾರಗಳನ್ನು ಪಡೆಯಲಿದ್ದಾರೆ.
ಸಂವಿಧಾನ ತಿದ್ದುಪಡಿಯ ಪರವಾಗಿ 51.4 ಶೇಕಡ ಮತಗಳು ಬಿದ್ದರೆ, ವಿರುದ್ಧವಾಗಿ 48.6 ಶೇ. ಮತಗಳು ದಾಖಲಾಗಿವೆ ಎಂದು ಸರಕಾರಿ ಸುದ್ದಿ ಸಂಸ್ಥೆ ಅನಡೊಲು ವರದಿ ಮಾಡಿದೆ. 85 ಶೇ. ಮತದಾನವಾಗಿತ್ತು.