×
Ad

ಚೀನಾವನ್ನು ಹತ್ತಿಕ್ಕಲು ಭಾರತ ಲಾಮಾರನ್ನು ಬಳಸಬಾರದು : ಬೀಜಿಂಗ್

Update: 2017-04-17 20:54 IST

ಬೀಜಿಂಗ್, ಎ. 17: ಟಿಬೆಟ್‌ನ ದೇಶಭ್ರಷ್ಟ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ಅವರ ಇತ್ತೀಚಿನ ಅರುಣಾಚಲಪ್ರದೇಶ ಭೇಟಿಯು ಭಾರತ-ಚೀನಾ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸೋಮವಾರ ಹೇಳಿರುವ ಚೀನಾ, ಭಾರತವು ಬೀಜಿಂಗ್ ವಿರುದ್ಧ ದಲಾಯಿ ಲಾಮಾರನ್ನು ಬಳಸಿಕೊಳ್ಳಬಾರದು ಎಂದಿದೆ.

‘‘ದಲಾಯಿ ಲಾಮಾರ ಅರುಣಾಚಲಪ್ರದೇಶ ಭೇಟಿಯು ಭಾರತ-ಚೀನಾ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಟಿಬೆಟ್ ಸಂಬಂಧಿ ವಿಷಯಗಳಲ್ಲಿ ಭಾರತ ತನ್ನ ಬದ್ಧತೆಯನ್ನು ಉಳಿಸಿಕೊಳ್ಳಬೇಕು ಹಾಗೂ ಚೀನಾವನ್ನು ಹತ್ತಿಕ್ಕಲು ದಲಾಯಿ ಲಾಮಾರನ್ನು ಬಳಸಿಕೊಳ್ಳಬಾರದು’’ ಎಂದು ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್ ಹೇಳಿದರು.

ಈ ರೀತಿಯಲ್ಲಿ ಮಾತ್ರ ‘‘ನಾವು ಗಡಿ ವಿವಾದದ ಇತ್ಯರ್ಥಕ್ಕೆ ಉತ್ತಮ ವಾತಾವರಣವನ್ನು ಸೃಷ್ಟಿಸಬಹುದು’’ ಎಂದರು.

ಟಿಬೆಟ್ ಚೀನಾದ ಭಾಗವಾಗಿದೆ ಎಂಬ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬುದಾಗಿ ಭಾರತದ ವಿದೇಶ ಸಚಿವಾಲಯ ಶುಕ್ರವಾರ ನೀಡಿರುವ ಹೇಳಿಕೆಗೆ ಚೀನಾದ ವಕ್ತಾರರು ಪ್ರತಿಕ್ರಿಯಿಸುತ್ತಿದ್ದರು.

ಜಟಿಲ ಗಡಿ ವಿವಾದಕ್ಕೆ ನ್ಯಾಯಯುತ ಹಾಗೂ ಪರಸ್ಪರ ಸ್ವೀಕಾರಾರ್ಹ ಪರಿಹಾರವೊಂದನ್ನು ಕಂಡುಹಿಡಿಯುವ ಪ್ರಯತ್ನಗಳನ್ನು ಭಾರತ ಮುಂದುವರಿಸುವುದು ಎಂದು ವಿದೇಶ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೇ ಶುಕ್ರವಾರ ಹೇಳಿದ್ದರು.

ದಲಾಯಿ ಲಾಮಾ ಎಪ್ರಿಲ್ 4ರಿಂದ 11ರವರೆಗೆ ಅರುಣಾಚಲಪ್ರದೇಶ ಪ್ರವಾಸದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News