ನಾಳೆ ಕಂಬಳ ಮಸೂದೆ ರಾಷ್ಟ್ರಪತಿಗೆ ಸಲ್ಲಿಕೆ: ಡಿವಿಎಸ್
ಉಡುಪಿ, ಎ.17: ಕಂಬಳ ಕ್ರೀಡೆಗೆ ಸಂಬಂಧಿಸಿ ರಾಜ್ಯ ಸರಕಾರ ಮಂಡಿಸಿರುವ ಮಸೂದೆಯಲ್ಲಿ ಕೆಲವೊಂದು ನ್ಯೂನ್ಯತೆಗಳನ್ನು ಕೇಂದ್ರ ಗೃಹ ಇಲಾಖೆ ಸರಿಪಡಿಸಿದ್ದು, ಇದಕ್ಕೆ ಅಂಕಿತ ಹಾಕುವ ನಿಟ್ಟಿನಲ್ಲಿ ಎ.18ರಂದು ರಾಷ್ಟ್ರಪತಿಗೆ ಸಲ್ಲಿಸಲಾಗುವುದು ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ರಾಷ್ಟ್ರಪತಿಯನ್ನು ಭೇಟಿ ಮಾಡಲಾಗುವುದು. ಜಲ್ಲಿಕಟ್ಟಿಗೆ ಶೀಘ್ರವೇ ಅಂಕಿತ ಸಿಕ್ಕಿರುವುದರಿಂದ ಕಂಬಳಕ್ಕೂ ಯಾವುದೇ ತೊಂದರೆ ಆಗುವುದಿಲ್ಲ ಎಂಬುದು ನಮ್ಮ ಆಶಯ. ಅಲ್ಲದೆ ರಾಷ್ಟ್ರಪತಿ ಇಂತಹ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮಸೂದೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದರು.
ಎತ್ತಿಹೊಳೆ ಯೋಜನೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಯೋಜನೆ ಬಗ್ಗೆ ರಾಜ್ಯ ನೀರಾವರಿ ಇಲಾಖೆ ಕರಾವಳಿ ಜನತೆಗೆ ಮಾಹಿತಿ ನೀಡಬೇಕಾದ ಅಗತ್ಯವಿದೆ. ಮಳೆಗಾಲದಲ್ಲಿ 100 ದಿನ ಮಾತ್ರ ಬೀಳುವ ನೀರನ್ನು ಆ ಭಾಗಕ್ಕೆ ತೆಗೆದುಕೊಂಡು ಹೋಗುವುದರಿಂದ ಸಮುದ್ರಕ್ಕೆ ಹರಿದು ಹೋಗುವ ನೀರಿನಲ್ಲಿ ಸ್ಪಲ್ಪ ವ್ಯತ್ಯಾಸ ಆಗಬಹುದೇ ಹೊರತು ಬೇರೇನು ಆಗುವುದಿಲ್ಲ ಎಂದರು.
ಈ ರೀತಿ ಮಾಡುವುದರಿಂದ ಮಳೆಗಾಲದಲ್ಲಿ ಕಡಬ, ಪುತ್ತೂರು, ಬಂಟ್ವಾಳ ಪ್ರದೇಶ ಮುಳುಗಡೆಯಾಗುವುದು ಕಡಿಮೆಯಾಗುತ್ತದೆ ಮತ್ತು ಆ ಭಾಗದಲ್ಲಿ ನೀರಿಲ್ಲದವರಿಗೆ ನೀರು ನೀಡಿದಂತಾಗುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ತೊಂದರೆಯಾಗಲ್ಲ. ರಾಜ್ಯದ ಎಲ್ಲರಿಗೂ ಕುಡಿಯುವ ನೀರು ಕೊಡಬೇಕು ಮತ್ತು ಇಲ್ಲಿಯವರಿಗೆ ಯಾವುದೇ ತೊಂದರೆಯಾಗಬಾರದು ಎಂಬುದೇ ನಮ್ಮ ಉದ್ದೇಶ ಎಂದು ಅವರು ಹೇಳಿದರು.
ತುಳು ಭಾಷೆಯನ್ನು ಎಂಟನೆ ಪರಿಚ್ಛೇದಕ್ಕೆ ಸೇರಿಸುವ ಪ್ರಸ್ತಾಪ ಹಲವು ವರ್ಷಗಳಿಂದ ಬಾಕಿ ಇದ್ದು, ಈ ಸಂಬಂಧ ರಚಿಸಲಾದ ಕಮಿಟಿಯು ತುಳು ಜೊತೆ ಇನ್ನೂ ಎರಡೂ ಮೂರು ಭಾಷೆಗಳಿಗೂ ಅರ್ಹತೆ ಇದೆ ಎಂಬುದಾಗಿ ವರದಿ ನೀಡಿದೆ. ಆದರೆ ದೇಶದ ಬೇರೆ ಬೇರೆ ಭಾಗದಿಂದ ನೂರಾರು ಭಾಷೆಗಳನ್ನು ಎಂಟನೆ ಪರಿಚ್ಛೇಧಕ್ಕೆ ಸೇರಿಸಬೇಕೆಂದು ಕೂಗು ಜೋರಾಗಿ ಕೇಳಿ ಬರುತ್ತಿರುವು ದರಿಂದ ಈ ಪ್ರಕ್ರಿಯೆ ಇನ್ನು ಆಗಿಲ್ಲ ಎಂಬುದು ಗಮನಕ್ಕೆ ಬಂದಿದೆ ಎಂದು ಸಚಿವ ಸದಾನಂದ ಗೌಡ ತಿಳಿಸಿದರು
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಯ ದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಮೊದಲಾದವರು ಹಾಜರಿದ್ದರು