×
Ad

ಮೋದಿಯ ಅಶ್ವಮೇಧ ಕುದುರೆಯನ್ನು ತಡೆಯಲು ಜೆಡಿಎಸ್‌ಗೆ ಮಾತ್ರ ಸಾಧ್ಯ: ಕುಮಾರಸ್ವಾಮಿ

Update: 2017-04-17 22:15 IST

ಉಡುಪಿ, ಎ.17: ಪ್ರಧಾನಿ ನರೇಂದ್ರ ಮೋದಿಯವರ ಅಶ್ವಮೇಧ ಕುದುರೆಯನ್ನು ಕರ್ನಾಟಕದ ಗಡಿಯಲ್ಲಿ ತಡೆಯುವ ಪೂರ್ಣ ವಿಶ್ವಾಸ ಜೆಡಿಎಸ್ ಪಕ್ಷಕ್ಕಿದೆ. ಯಾಕೆಂದರೆ ಕರ್ನಾಟಕ ರಾಜ್ಯದಲ್ಲಿ 10 ವರ್ಷಗಳಲ್ಲಿ ಬಿಜೆಪಿ ಓಟಕ್ಕೆ ಬ್ರೇಕ್ ಹಾಕಿದ್ದರೆ ಅದು ಜೆಡಿಎಸ್ ಮಾತ್ರ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕಾಪುವಿನಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಬಿಜೆಪಿಯ 5 ವರ್ಷದ ಆಡಳಿತದಲ್ಲಿ ಪಕ್ಷ ರಾಜ್ಯದಲ್ಲಿ ಮಾಡಿರುವ ಭ್ರಷ್ಟಾಚಾರ ಮತ್ತು ಕಾನೂನು ವಿರೋಧಿ ನಿರ್ಧಾರಗಳ ಬಗ್ಗೆ ದಾಖಲೆ ಸಮೇತ ವಿಷಯವನ್ನು ಹೊರಗೆ ತಂದಿದ್ದು ಜೆಡಿಎಸ್. ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್ ಇದ್ದರೂ ಕೇವಲ 28 ಶಾಸಕರ ಜೆಡಿಎಸ್ ಆವತ್ತಿನ ವಿರೋಧ ಪಕ್ಷದ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿತ್ತು. ಬಿಜೆಪಿಯ ಹಲವಾರು ತಪ್ಪುಗಳನ್ನು ಎತ್ತಿತೋರಿಸಿ ಯಾವುದೇ ರಾಜಿಗೊಳಗಾಗದೇ ಸಡ್ಡು ಹೊಡೆದಿರುವುದು ನಾವು ಮಾತ್ರ ಎಂದವರು ನುಡಿದರು.

ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೆ. ಉತ್ತರ ಪ್ರದೇಶ ಚುನಾವಣೆ ಇರ ಬಹುದು, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗಳ ಹಿನ್ನೆಲೆ ಯಲ್ಲಿ ಕೆಲವರಿಗಾದರೂ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆಯ ಭಾವನೆ ಬರಬಹುದು. ಆದರೆ ಆ ರೀತಿಯ ಯಾವುದೇ ಹೊಂದಾಣಿಕೆ ಆಗಲು ಸಾಧ್ಯವಿಲ್ಲ. ಕಾರಣ ಈಗಾಗಲೇ ಕರ್ನಾಟಕದಲ್ಲಿ ಕಳೆದ 4 ವರ್ಷಗಳ ಕಾಂಗ್ರೆಸ್ ಆಡಳಿತದ ಬಗ್ಗೆ ಜನತೆಯಲ್ಲಿ ಆಕ್ರೋಶ ಮತ್ತು ನಿರಾಶೆ ಇದೆ. ಇವತ್ತು ಕರ್ನಾಟಕದಲ್ಲಿ ಜಾತ್ಯತೀತ ಜನತಾ ದಳ ಏಕಾಂಗಿಯಾಗಿ ಮುಂದಿನ ಚುನಾವಣೆಯನ್ನು ಎದುರಿಸುವ ತೀರ್ಮಾನ ಮಾಡಿದೆ. ಎಲ್ಲಾ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನೂ ನಿಲ್ಲಿಸುತ್ತೇವೆ ಎಂದರು.

ಉಪಚುನಾವಣೆಗಳ ಫಲಿತಾಂಶದ ಆಧಾರದ ಮೇಲೆ ಮುಂದಿನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ನಿರ್ಧಾರ ಮಾಡಲು ಸಾಧ್ಯವಿಲ್ಲ. ಇದಕ್ಕೆ 2003ರಲ್ಲಿ ಎಸ್‌.ಎಂ. ಕೃಷ್ಣರ ಆಡಳಿತಾವಧಿಯಲ್ಲಿ ಹುಮ್ನಾಬಾದ್ ಹಾಗೂ ಹುನಗುಂದ ಉಪಚುನಾವಣೆಯ ಫಲಿತಾಂಶವೇ ಸಾಕ್ಷಿ. ಕಾಂಗ್ರೆಸ್ ಆ ಎರಡು ಸೀಟುಗಳನ್ನು ಗೆದ್ದರೂ ಆರೇ ತಿಂಗಳ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೀಟು 141ರಿಂದ 62ಕ್ಕಿಳಿದು ದಯನೀಯ ಸೋಲು ಅನುಭವಿಸಿತು. ಆ ಎರಡು ಕ್ಷೇತ್ರಗಳು ಜೆಡಿಎಸ್ ಮತ್ತು ಬಿಜೆಪಿ ಪಾಲಾದವು ಎಂದವರು ವಿವರಿಸಿದರು.

ಬಿಜೆಪಿಯನ್ನು ಜೆಡಿಎಸ್ ಏಕಾಂಗಿಯಾಗಿ ತಡೆಯಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದಾಗ, "ನನಗೆ ಆ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಅದಕ್ಕೆ ಕಾರಣ ಬಿಜೆಪಿಯ ಐದು ವರ್ಷಗಳ ಆಡಳಿತ. ಇದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಆ ಆಡಳಿತವನ್ನೂ ಮರೆತಿಲ್ಲ, ಕಾಂಗ್ರೆಸ್ ಆಡಳಿತವನ್ನೂ ಮರೆತಿಲ್ಲ. ಈಗಾಗಲೇ ಎರಡಕ್ಕೂ ಅವಕಾಶ ನೀಡಿದ್ದಾರೆ. ಈ ಬಾರಿ ಜೆಡಿಎಸ್‌ಗೆ ನನ್ನ ನಾಯಕತ್ವದಲ್ಲಿ ಗೆಲ್ಲಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ" ಎಂದರು.

ದೇಶದೆಲ್ಲೆಡೆ ಪ್ರಾದೇಶಿಕ ಪಕ್ಷಗಳು ದಯನೀಯ ಸೋಲು ಕಾಣುತ್ತಿರುವಾಗ ನಿಮ್ಮ ವಿಶ್ವಾಸ ಸ್ವೀಕಾರಾರ್ಹವೇ ಎಂದು ಕೇಳಿದಾಗ, ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ರಾಜ್ಯದಲ್ಲಿ ಜೆಡಿಎಸ್‌ನ್ನು ಬೆಂಬಲಿಸಲು ಹಲವು ಕಾರಣಗಳಿವೆ. ನೀರಾವರಿ ಯೋಜನೆಗೆ ಎರಡೂ ಪಕ್ಷಗಳು ಅನ್ಯಾಯ ಮಾಡಿವೆ. ಮಹಾನದಿ, ಕೃಷ್ಣ ನದಿ ಹಂಚಿಕೆ ವಿಷಯದಲ್ಲಿ ಎರಡು ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರಕಾರವೂ ರಾಜ್ಯದ ನೆರವಿಗೆ ಬಂದಿಲ್ಲ. ಈ ಅನ್ಯಾಯದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯತೆ ಹಾಗೂ ಅನಿವಾರ್ಯತೆ ಇದೆ. ಎರಡೂ ಪಕ್ಷಗಳ ಆಡಳಿತವನ್ನು ಜನತೆ ನೋಡಿದ್ದಾರೆ. ಈ ಬಾರಿ ಪ್ರಾದೇಶಿಕ ಪಕ್ಷವಾದ ನಮಗೆ ಅಧಿಕಾರ ನೀಡುತ್ತಾರೆ" ಎಂಬ ವಿಶ್ವಾಸವಿದೆ ಎಂದರು.

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಅವರು ಜಮ್ಮು ಕಾಶ್ಮೀರದ ವಿಷಯದಲ್ಲಿ ದೇವೇಗೌಡರನ್ನು, ಪಾಕಿಸ್ತಾನದ ಮುಷರಫ್‌ರಿಗೆ ಹೋಲಿಸಿ ಟ್ವೀಟ್ ಮಾಡಿರುವ ಕುರಿತು ಪ್ರಶ್ನಿಸಿದಾಗ, ದೇವೇಗೌಡರು 10 ತಿಂಗಳ ಪ್ರಧಾನಿಯಾಗಿದ್ದಾಗ ಜಮ್ಮು ಕಾಶ್ಮೀರ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕಿತ್ತು. ಅಂದು ರಾಜ್ಯದಲ್ಲಿ ಆಗಿರುವ ಅಭಿವೃದ್ಧಿಯನ್ನು ನೆನಪಿಸಿಕೊಂಡಿದ್ದರೆ ಹೀಗೆ ಹೇಳುತ್ತಿರಲ್ಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News