ಸೀಮೆಎಣ್ಣೆ ತೊರೆದರೆ ಸೋಲಾರ್ ಎಲ್‌ಇಡಿ ಬಲ್ಬ್: ಯು.ಟಿ.ಖಾದರ್
ಉಳ್ಳಾಲ, ಎ.17: ಅಡುಗೆ ಅನಿಲ ಹೊಂದಿರುವ ಗ್ರಾಮೀಣ ಭಾಗದ ಜನರಿಗೆ ಒಂದು ಲೀಟರ್ ಸೀಮೆಎಣ್ಣೆ ನೀಡುವ ಯೋಜನೆ ಸರಕಾರದ ಮುಂದಿದೆ. ಆದರೆ ಸೀಮೆಎಣ್ಣೆಯನ್ನು ತೊರೆದರೆ ಎರಡು ಸೋಲಾರ್ ಎಲ್‌ಇಡಿ ಬಲ್ಬ್ ನೀಡುವ ಯೋಚನೆ ಇದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
ಅರಣ್ಯ ಇಲಾಖೆಯ ವತಿಯಿಂದ ದೇರಳಕಟ್ಟೆ ನೇತಾಜಿ ಶಾಲೆಯಲ್ಲಿ ಸೋಮವಾರ ನಡೆದ ಮಂಗಳೂರು ಕ್ಷೇತ್ರ ವ್ಯಾಪ್ತಿಯ ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಿಸಿ ಅವರು ಮಾತನಾಡಿದರು.
ಅಡುಗೆ ಅನಿಲ ಸಂಪರ್ಕ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಬಾರದು ಎನ್ನುವ ನೆಲೆಯಲ್ಲಿ ಬಡವರಿಗೂ ನೀಡುವ ಯೋಜನೆ ಸರಕಾರದ್ದಾಗಿದೆ. ಎಸ್ಸಿ-ಎಸ್ಟಿ ಕುಟುಂಬಗಳಿಗೆ ವಿವಿಧ ಸವಲತ್ತು ನೀಡುವ ನಿಟ್ಟಿನಲ್ಲಿ ಸರಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ನಿವೇಶನವಿದ್ದು ಮನೆಯಿಲ್ಲದವರು ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಮನೆ ನಿರ್ಮಾಣ ಮಾಡಿಕೊಡುವುದನ್ನು ಕಡ್ಡಾಯಗೊಳಿಸಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಸದಸ್ಯರಾದ ಮಮತಾ ಡಿ.ಎಸ್.ಗಟ್ಟಿ, ರಶೀದಾ ಬಾನು, ತಾಪಂ ಸದಸ್ಯರಾದ ಅಬೂಬಕರ್ ಸಿದ್ದೀಕ್ ಕೊಳರಂಗೆ, ಪದ್ಮಾವತಿ ಎಸ್, ಸುರೇಖಾ ಚಂದ್ರಹಾಸ, ಶಶಿಪ್ರಭಾ ಶೆಟ್ಟಿ, ರವಿಶಂಕರ್, ಅಬ್ದುಲ್ ಜಬ್ಬಾರ್ ಬೋಳಿಯಾರ್, ವಿಲ್ಮಾ, ತಾಪಂ ಮಾಜಿ ಸದಸ್ಯ ಮುಸ್ತಫಾ ಮಲಾರ್, ಬೆಳ್ಮ ಗ್ರಾಪಂ ಉಪಾಧ್ಯಕ್ಷ ಸಿ.ಎಂ. ಅಬ್ದುಲ್ ಸತ್ತಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಅರಣ್ಯ ಇಲಾಖೆಯ ಅಧಿಕಾರಿ ಶ್ರೀಧರ್ ಸ್ವಾಗತಿಸಿದರು. ರವಿಕುಮಾರ್ ವಂದಿಸಿದರು.