ಹಡೀಲು ಕೃಷಿಭೂಮಿ ಸದ್ಬಳಕೆಗೆ ತಾಂತ್ರಿಕ ಕಾರ್ಯಾಗಾರ: ಪ್ರಕಾಶ್ ಕಮ್ಮರಡಿ

Update: 2017-04-17 17:46 GMT

ಉಡುಪಿ, ಎ.17: ಜಿಲ್ಲೆಯಲ್ಲಿ ಪಾಳು ಬಿದ್ದಿರುವ ಕೃಷಿಭೂಮಿಯ ಸದ್ಬಳಕೆ ಹಾಗೂ ಭತ್ತದ ಬೆಳೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಸಮಗ್ರ ನೀತಿ ರೂಪಿಸಲು ಮೇ ಮೊದಲ ವಾರದಲ್ಲಿ ಉಡುಪಿಯಲ್ಲಿ ತಾಂತ್ರಿಕ ಕಾರ್ಯಾಗಾರವೊಂದನ್ನು ಆಯೋಜಿಸಲಾಗುವುದು ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ. ಎನ್.ಪ್ರಕಾಶ್ ಕಮ್ಮರಡಿ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮತ್ತು ಕೃಷಿ, ತೋಟಗಾರಿಕೆ ಹಾಗೂ ರೈತರ ಜೊತೆ ಸವಿವರ ಚರ್ಚೆ ನಡೆಸಿ, ಕೃಷಿಕರ ಪರವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ನೀತಿ ನಿರೂಪಿಸಲು ಹಲವು ಶಿಪಾರಸ್ಸುಗಳನ್ನು ಮಾಡಿರುವುದಾಗಿ ನುಡಿದರು.

ಇದೀಗ ಕೃಷಿ ಬೀಳು ಭೂಮಿಯ ಸದ್ಬಳಕೆಗಾಗಿ ಕೇಂದ್ರದ ನೀತಿ ಆಯೋಗವು ಹೊರತಂದಿರುವ ಮಾದರಿ ಭೂಗುತ್ತಿಗೆ ಕಾಯಿದೆ-2016ರ ಕುರಿತು ಕಾರ್ಯಾಗಾರದಲ್ಲಿ ಸಮಗ್ರ ಮಾಹಿತಿ ನೀಡಲು ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಕೇರಳದ ಬೆಸ್ಟ್ ಪ್ರಾಕ್ಟಿಸ್‌ಗಳನ್ನು ಚರ್ಚಿಸಲಾಗುವುದು. ಈ ಸಂಬಂಧ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳುವುದಾಗಿ ಅಧ್ಯಕ್ಷರು ವಿವರಿಸಿದರು.

ಜಿಲ್ಲೆಯಲ್ಲಿ 1,20,000 ಹೆಕ್ಟೆರ್ ಭತ್ತದ ಕೃಷಿಭೂಮಿಯಲ್ಲಿ 11,000 ಹೆ. ಭೂಮಿ ಹಡೀಲು ಬಿದ್ದಿದ್ದು, ಸಮಸ್ಯೆ ಪರಿಹಾರಕ್ಕೆ ರೈತರ ಜೊತೆ ಸಮಾಲೋಚನೆ ನಡೆಸಿ ಕೃಷಿ ಉತ್ಪಾದನಾ ನೀತಿಯನ್ನು ರೂಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಕರಾವಳಿ ವ್ಯಾಪ್ತಿಯಲ್ಲಿ ಕೃಷಿ ಕೂಲಿ ಕಾರ್ಮಿಕರ ಕೊರತೆ, ಕೃಷಿ ಯಂತ್ರೋಪಕರಣಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೈತ ಗುಂಪುಗಳಿಗೆ ನೀಡುವ ಬಗ್ಗೆ, ಕಾಡು ಪ್ರಾಣಿಗಳಿಂದ ಕೃಷಿ ನಾಶವಾದರೆ ಪರಿಹಾರ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಅದರಲ್ಲೂ ಪಾಳು (ಹಡಿಲು) ಭೂಮಿಯನ್ನು ಕೇರಳದ ‘ಕುಟುಂಬಶ್ರೀ’ ಮಾದರಿಯಲ್ಲಿ ಮಹಿಳಾ ಗುಂಪುಗಳಿಗೆ ನೀಡುವುದಕ್ಕೆ ಆದ್ಯತೆ ನೀಡುವ ಬಗ್ಗೆಯೂ ಚರ್ಚೆ ನಡೆಯಿತು. ಕೃಷಿ ಭಾಗ್ಯ ಯೋಜನೆ ವಿಸ್ತರಣೆಯ ಬಗ್ಗೆಯೂ ಕಮ್ಮರಡಿ ವಿವರಿಸಿದರು. ರೈತರ ಆತ್ಮಹತ್ಯೆ ತಡೆಯಲು ರಾಜ್ಯದ 8 ಜಿಲ್ಲೆಗಳಲ್ಲಿ 8 ಗ್ರಾಮಗಳನ್ನು 8 ಕೆವಿಕೆಗಳ ಮೂಲಕ ದತ್ತು ತೆಗೆದುಕೊಂಡು ಸಮಗ್ರ ಸಮೀಕ್ಷೆ ನಡೆಸಿ ಎಲ್ಲ ಯೋಜನೆಗಳನ್ನುಬಳಸಿಕೊಂಡು, ತಂತ್ರಜ್ಞಾನವನ್ನು ಈ ಗ್ರಾಮಗಳಿಗೆ ವರ್ಗಾಯಿಸಿ, ರೈತರ ಕಲ್ಯಾಣಕ್ಕೆ ರೂಪಿಸಿರುವ 58 ಕಾರ್ಯಕ್ರಮಗಳನ್ನು ಇಲ್ಲಿ ಅಳವಡಿಸಿ ಅಭಿವೃದ್ಧಿ ಪಡಿಸುವ ಪೈಲಟ್ ಪ್ರಾಜೆಕ್ಟ್‌ನ್ನು ರೂಪಿಸಲಾಗಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕರಾವಳಿ ಜಿಲ್ಲೆಗಳ ಕುಚ್ಚಲಕ್ಕಿಯನ್ನೂ ಸಿರಿಧಾನ್ಯವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದ ಅವರು, ಮಳೆಯಾಶ್ರಿತ ಕುಚ್ಚಲಕ್ಕಿಯಲ್ಲಿ ಅತ್ಯುತ್ತಮ ತಳಿಗಳಿದ್ದು, ಈ ಅಕ್ಕಿಯೂ ಸಿರಿಧಾನ್ಯಕ್ಕೆ ಸಮ ಎಂದರು. ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್,ಇತರ ಅಧಿಕಾರಿಗಳು ಹಾಗೂ ರೈತರು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News