ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ‘ಪುತ್ತೂರು ಬೆಡಿ’
ಪುತ್ತೂರು, ಎ.17: ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ ರಾತ್ರಿ ಕಿಕ್ಕಿರಿದು ಸೇರಿದ್ದ ಲಕ್ಷಾಂತರ ಭಕ್ತ ಸಾಗರದ ನಡುವೆ ಬ್ರಹ್ಮರಥೋತ್ಸವ ಮತ್ತು ‘ಪುತ್ತೂರು ಬೆಡಿ’ ಎಂದೇ ಖ್ಯಾತಿಯ ಸುಡುಮದ್ದು ಪ್ರದರ್ಶನ ನಡೆಯಿತು. ರಾತ್ರಿ 9:30ಕ್ಕೆ ಆರಂಭಗೊಂಡು ಸುಮಾರು ಅರ್ಧ ಗಂಟೆಗಳ ಕಾಲ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿತು.
ಗರ್ನಾಲ್ ಇನ್ನಿತರ ಅತಿಯಾದ ಶಬ್ದದ ಯಾವುದೇ ಪಟಾಕಿಗಳು ಈ ಬಾರಿ ಇರಲಿಲ್ಲ. ಪುತ್ತೂರು ತಾಲೂಕು ಮಾತ್ರವಲ್ಲದೆ ದೂರದ ಊರುಗಳಿಂದ ಲಕ್ಷಾಂತರ ಮಂದಿ ಭಕ್ತರು ದೇವಾಲಯದ ಎದುರಿನ ದೇವರು ಮಾರು ಗದ್ದೆಗೆ ಆಗಮಿಸಿದ್ದು, ಇದು ಜಾತ್ರೆಯ ವಿಶೇಷತೆಯಾಗಿತ್ತು. ರಾತ್ರಿ ಸುಮಾರು 7:30ರ ವೇಳೆಗೆ ದೇವಾಲಯದ ಎದುರಿನ ದೇವರ ಮಾರುಗದ್ದೆಯಲ್ಲಿ ನಿಲ್ಲಿಸಲಾಗುವ ಬ್ರಹ್ಮರಥದಲ್ಲಿ ದೇವರ ರಥಾರೂಢನವಾಗುತ್ತಿದ್ದಂತೆ ಸೀಮೆಯ ದೇವರಾದ ಮಹಾಲಿಂಗೇಶ್ವರನಿಗೆ ಜಯಘೋಷ ಮೊಳಗಿತು.
ಬಳಿಕ ಬೆಡಿ ಪ್ರದರ್ಶನ ನಡೆಯಿತು. ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸುವ ಹಲವು ಬಗೆಯ ಸುಡುಮದ್ದು ಪ್ರದರ್ಶನಗಳು ಚಿತ್ತಸೂರೆಗೊಂಡಿತು. ಬೆಡಿ ಪ್ರದರ್ಶನದ ಬಳಿಕ ಬ್ರಹ್ಮರಥೋತ್ಸವ ನಡೆಯಿತು. ಸುಗಮ ಸಂಚಾರದ ದೃಷ್ಟಿಯಿಂದ ಪುತ್ತೂರಿನ ಅರುಣಾ ಚಿತ್ರಮಂದಿರದ ಬಳಿಯಿಂದ ಬೊಳುವಾರು ತನಕ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.