ಎ.28ರ ‘ಮಂಗಳೂರು ಚಲೋ’ಗೆ 60 ಸಂಘಟನೆಗಳ ಸಹಭಾಗಿತ್ವ: ಯುನೈಟೆಡ್ ಮುಸ್ಲಿಂ ಫ್ರಂಟ್
# 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ
# ಮುಸ್ಲಿಂ ಸಮುದಾಯದ ಜನಪ್ರತಿನಿಧಿಗಳಿಂದ ಸಿಗದ ನ್ಯಾಯ: ಆರೋಪ
ಮಂಗಳೂರು, ಎ.18: ಅಹ್ಮದ್ ಖುರೇಷಿ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಮತ್ತು ನ್ಯಾಯಕ್ಕೆ ಆಗ್ರಹಿಸಿ ವಿವಿಧ ಮುಸ್ಲಿಮ್ ಸಂಘಟನೆಗಳು ಎ.4ರಿಂದ ಹೋರಾಟ ನಡೆಸುತ್ತಿದ್ದರೂ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿಂದ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ಯುನೈಟೆಡ್ ಮುಸ್ಲಿಂ ಫ್ರಂಟ್‌ನ ಮುಖಂಡರು ಆರೋಪಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಸ್ಟೀಸ್ ಫಾರ್ ಖುರೈಷಿ ಯುನೈಟೆಡ್ ಮುಸ್ಲಿಂ ಫ್ರಂಟ್‌ನ ಸಂಚಾಲಕ ಹಾಗು ಮಾಜಿ ಮೇಯರ್ ಕೆ.ಅಶ್ರಫ್, ಜಿಲ್ಲೆಯಲ್ಲಿ ನಾಲ್ಕು ಲಕ್ಷ ಮುಸ್ಲಿಮ್ ಮತದಾರರಿದ್ದಾರೆ. ಇವರ ಮತಗಳನ್ನು ಪಡೆದು ಈವತ್ತು ಅಧಿಕಾರ ಚಲಾಯಿಸುತ್ತಿರುವ ಮುಸ್ಲಿಮ್ ಸಮುದಾಯದ ಜನಪ್ರತಿನಿಧಿಗಳು ಸಮುದಾಯದ ಮೇಲಾಗುವ ದೌರ್ಜನ್ಯದ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಈ ಘಟನೆಯ ಮಧ್ಯೆ ಉಡುಪಿ ಮತ್ತು ಕೊಣಾಜೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪೊಲೀಸರ ಅಮಾನತು ಆಗಿದೆ. ಆದರೆ, ಅಹ್ಮದ್ ಖುರೇಷಿ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ, ನ್ಯಾಯ ಕೇಳಿ ಪ್ರತಿಭಟನೆ ನಡೆಸಿದವರ ಮೇಲೆ ಲಾಠಿಜಾರ್ಜ್ ನಡೆಸಿದ ಪೊಲೀಸರ ಅಮಾನತು ಆಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ನ್ಯಾಯದ ಭರವಸೆ ನೀಡಿದ್ದರೂ ಕೂಡ ಜಿಲ್ಲೆಯ ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳು ಈ ವಿಷಯದಲ್ಲಿ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದರು.
ಅಹ್ಮದ್ ಖುರೇಷಿಗೆ ನ್ಯಾಯ ಸಿಗಬೇಕು. ಮತ್ತೆಂದೂ ಯಾರಿಗೂ ಇಂತಹ ಅನ್ಯಾಯವಾಗಬಾರದು. ಈ ನಿಟ್ಟಿನಲ್ಲಿ ಎ.28ರಂದು ಅಪರಾಹ್ನ 3ಕ್ಕೆ ನಗರದ ನೆಹರೂ ಮೈದಾನದಲ್ಲಿ ‘ಮಂಗಳೂರು ಚಲೋ’ ಕಾರ್ಯಕ್ರಮ ನಡೆಯಲಿದೆ. 60 ಸಂಘಟನೆಗಳ ಸುಮಾರು 25 ಸಾವಿರ ಮಂದಿ ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕೆ.ಅಶ್ರಫ್ ಹೇಳಿದರು.
*ಸ್ವಯಂ ಘೋಷಿತ ಜಾತ್ಯತೀತ ನಾಯಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಸ್ವಯಂ ಘೋಷಿತ ಜಾತ್ಯತೀತ ನಾಯಕರಿದ್ದಾರೆ. ಇವರ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಕಳೆದ ಚುನಾವಣೆಯ ಸಂದರ್ಭ ‘ನನ್ನ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ನಡೆಯುವ ಚುನಾವಣೆ ಎಂದಿದ್ದ ಈ ನಾಯಕರೊಬ್ಬರು ಅಧಿಕಾರಕ್ಕೇರಿದ ತಕ್ಷಣ ಪ್ರಭಾಕರ್ ಭಟ್‌ರನ್ನು ಬಂಧಿಸುವೆ ಎಂದಿದ್ದರು. ಆದರೆ ಆ ಭರವಸೆಯನ್ನು ಈಡೇರಿಸದೆ ಮುಸ್ಲಿಂ ಸಮುದಾಯವನ್ನು ವಂಚಿಸಿದ್ದಾರೆ. ಈ ಹಿಂದೆ ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಇದೇ ಕಲ್ಲಡ್ಕ ಪ್ರಭಾಕರ್ ಭಟ್ ಕೋಮುದ್ವೇಷದ ಭಾಷಣ ಮಾಡಿದ್ದರು. ಇದರ ವಿರುದ್ಧ ನಾನು ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಕಾಂಗ್ರೆಸ್ ಸರಕಾರವಿರುವಾಗ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಇಂತಹ ನಾಯಕರು ವೌನವಾಗಿರುವುದು ಖಂಡನೀಯ ಎಂದು ಯುನೈಟೆಡ್ ಮುಸ್ಲಿಂ ಫ್ರಂಟ್‌ನ ಸಹಸಂಚಾಲಕ ಮುಸ್ತಫಾ ಕೆಂಪಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ವೈಎಸ್ ರಾಜ್ಯ ನಾಯಕ ಅಶ್ರಫ್ ಕಿನಾರ, ದ.ಕ. ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಪಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ, ಯುನಿವೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ಡಾ.ಅಮೀರ್ ತುಂಬೆ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಸಿ.ಎಂ.ಮುಸ್ತಫಾ, ಮೊಯ್ದಿನ್ ಮೋನು, ಅಹ್ಮದ್ ಖುರೇಷಿಯ ಸಹೋದರ ಮುಹಮ್ಮದ್ ನಿಷಾದ್ ಉಪಸ್ಥಿತರಿದ್ದರು.