ಉದ್ಯಮಿ ವಿಜಯ ಮಲ್ಯ ಬಂಧನ
ಲಂಡನ್, ಎ.18: ಭಾರತದ ಹಲವಾರು ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ಸಾಲ ಬಾಕಿಯಿರಿಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯರನ್ನು ಮಂಗಳವಾರ ಬೆಳಗ್ಗೆ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಅವರನ್ನು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಶೀಘ್ರದಲ್ಲಿಯೇ ಹಾಜರುಪಡಿಸಲಾಗುವುದೆಂದು ತಿಳಿದು ಬಂದಿದೆ.
ಮಲ್ಯರನ್ನು ಇಂಗ್ಲೆಂಡಿನಿಂದ ಗಡೀಪಾರು ಮಾಡುವಂತೆ ಭಾರತ ಈಗಾಗಲೇ ಆ ದೇಶಕ್ಕೆ ಮನವಿ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಭಾರತದಿಂದ ಕಳೆದ ಮಾರ್ಚ್ ತಿಂಗಳಲ್ಲಿ ಲಂಡನ್ನಿಗೆ ಆಗಮಿಸಿದ್ದ ಮಲ್ಯರ ಪಾಸ್ ಪೋರ್ಟನ್ನು ನಂತರ ರದ್ದು ಪಡಿಸಲಾಗಿತ್ತು. 2012ರಲ್ಲಿ ಮುಚ್ಚಿದ ಅವರ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಗೆ ಸಂಬಂಧಿಸಿದಂತೆ ಮಲ್ಯ ರೂ.9,000 ಕೋಟಿ ರೂ.ಗೂ ಅಧಿಕ ಸಾಲ ಉದ್ದೇಶಪೂರ್ವಕವಾಗಿ ಬಾಕಿಯಿರಿಸಿದ್ದಾರೆ.
ಅವರನ್ನು ಗಡೀಪಾರು ಮಾಡುವಂತೆ ಭಾರತ ಮಾಡಿರುವ ಮನವಿಯನ್ನು ಇಂಗ್ಲೆಂಡಿನ ಸೆಕ್ರಟರಿ ಆಫ್ ಸ್ಟೇಟ್ ಈಗಾಗಲೇ ದೃಢೀಕರಿಸಿದ್ದಾರೆ. ‘‘ಈ ಮನವಿಯನ್ನು ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕಳುಹಿಸಲಾಗಿದ್ದು, ಜಿಲ್ಲಾ ನ್ಯಾಯಾಧೀಶರೊಬ್ಬರು ಅವರ ವಿರುದ್ಧ ವಾರಂಟ್ ಜಾರಿಗೊಳಿಸುವ ಬಗ್ಗೆ ಪರಿಗಣಿಸಲಿದ್ದಾರೆ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ್ ಬಗ್ಲೆ ಈಗಾಗಲೇ ಹೇಳಿದ್ದಾರೆ.