ಕೋಟಿ ಚೆನ್ನಯ ಮೂಲಸ್ಥಾನಕ್ಕೆ ಶಿಲಾ ಪರಿಕರ ಮೆರವಣಿಗೆ
ಪುತ್ತೂರು,ಎ.18: ಪುನರುತ್ಥಾನ ಕಾಮಗಾರಿಗಳು ನಡೆಯುತ್ತಿರುವ ದೇಯಿ ಬೈದ್ಯೆತಿ - ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಪುತ್ತೂರು ತಾಲೂಕಿನ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ಗೆ ಭಕ್ತರು ಸಮರ್ಪಿಸಿದ ಶಿಲಾ ಪರಿಕರಗಳನ್ನು ಮಂಗಳವಾರ ಬಂಟ್ವಾಳದಿಂದ ಮೆರವಣಿಗೆ ಮೂಲಕ ತಂದು ಕ್ಷೇತ್ರಕ್ಕೆ ಸಮರ್ಪಿಸಲಾಯಿತು.
ಮೆಲ್ಕಾರ್‌ನ ಬಿರ್ವ ಸೆಂಟರ್ ಬಳಿ ಉದ್ಘಾಟನೆಗೊಂಡ ಮೆರವಣಿಗೆಯು ಕಲ್ಲಡ್ಕ, ಮಾಣಿ, ಪುತ್ತೂರು, ಕುಂಬ್ರ, ಕೌಡಿಚ್ಚಾರ್ ಮಾರ್ಗವಾಗಿ ಸಾಗಿತು. ಕೆಂಪುಕಲ್ಲು, ಜಲ್ಲಿ ಮತ್ತಿತರ ನಿರ್ಮಾಣ ಕಾವಗಾರಿಗಳಿಗೆ ಸಂಬಂಧಿಸಿದ ಪರಿಕರಗಳನ್ನು ಭಕ್ತರು ದಾನ ರೂಪದಲ್ಲಿ ನೀಡಿದ್ದಾರೆ.
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಪ್ರಮುಖರಾದ ಸೇಸಪ್ಪ ಕೋಟ್ಯಾನ್, ಡಿ.ಡಿ. ಕಟ್ಟೆಮಾರ್, ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಮಾಯಿಲಪ್ಪ ಸಾಲಿಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಲಾಪರಿಕರ ಮೆರವಣಿಗೆ ಸಂಘಟಿಸಿದ ಗೆಜ್ಜೆಗಿರಿ ಕ್ಷೇತ್ರದ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ್, ಕಾರ್ಯಾಧ್ಯಕ್ಷ ಯಶವಂತ ದೇರಾಜೆ, ವಲಯ ಸಮಿತಿಯ ಪದಾಧಿಕಾರಿಗಳು, ಶಿಲಾ ಪರಿಕರಗಳನ್ನು ನೀಡಿರುವ ದಾನಿಗಳು ಹಾಜರಿದ್ದರು. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ, ಕಾರ್ಯಾಧ್ಯಕ್ಷ ಪೀತಾಂಬರ ಹೇರಾಜೆ, ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಗೆಜ್ಜೆಗಿರಿ ಕ್ಷೇತ್ರದ ತಾಂತ್ರಿಕ ಸಲಹೆಗಾರ ಸಂತೋಷ್ ಕುಮಾರ್ ಕೊಟ್ಟಿಂಜ ಮತ್ತಿತರರು ಇದ್ದರು.
ಪುತ್ತೂರಿನಲ್ಲಿ ಸ್ವಾಗತ
ಪುತ್ತೂರಿನ ದರ್ಬೆ ಫಾದರ್ ಪತ್ರಾವೋ ವೃತ್ತದ ಬಳಿ ಮೆರವಣಿಗೆಯನ್ನು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರೂ, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಜಯಂತ ನಡುಬೈಲ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಡಿವೈಎಸ್ಪಿ ಭಾಸ್ಕರ ರೈ ಭಾಗವಹಿಸಿದ್ದರು.
ಗೆಜ್ಜೆಗಿರಿ ಕ್ಷೇತ್ರದ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲ್, ಯುವವಾಹಿನಿ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲ್, ಕಾರ್ಯದರ್ಶಿ ಉದಯ ಕೋಲಾಡಿ, ಬಿಲ್ಲವ ಸಂಘದ ಉಪಾಧ್ಯಕ್ಷ ಬಾಬು ಪೂಜಾರಿ ಬಲ್ನಾಡ್, ಕೋಶಾಧಿಕಾರಿ ಚಂದ್ರಕಾಂತ ಶಾಂತಿವನ, ಗೆಜ್ಜೆಗಿರಿ ಕ್ಷೇತ್ರದ ಕಾರ್ಯದರ್ಶಿಗಳಾದ ಸುಧಾಕರ ಸುವರ್ಣ, ಉಲ್ಲಾಸ್ ಕೋಟ್ಯಾನ್ ಮತ್ತಿತರರು ಇದ್ದರು.