×
Ad

ಕೇರಳ ಸರಕಾರದ ನೂತನ ಭಾಷಾನೀತಿಯಿಂದ ಕನ್ನಡಿಗರಿಗೆ ಸಂಕಷ್ಟ: ಕನ್ನಡಪರ ಸಂಘಟನೆಗಳಿಂದ ವಿಶೇಷ ಸಮಾಲೋಚನಾ ಸಭೆ

Update: 2017-04-18 19:52 IST

ಕಾಸರಗೋಡು, ಎ.18: ಕೇರಳ ರಾಜ್ಯ ಸರಕಾರವು ಹೊರಡಿಸಿರುವ ನೂತನ ಭಾಷಾ ನೀತಿಯ ಸುಗ್ರೀವಾಜ್ಞೆಯಿಂದಾಗಿ ಗಡಿನಾಡಿನ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಅಲ್ಪಸಂಖ್ಯಾತ ಕನ್ನಡಿಗರ ಮೇಲಾಗುವ ವಿವಿಧ ಪರಿಣಾಮ ಹಾಗೂ ಮುಂದೆ ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆ ಗಟ್ಟಿ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಮಂಗಳವಾರ ಅಪರಾಹ್ನ ಕುಂಬಳೆ ಸಿಟಿ ಹಾಲ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ವಿಶೇಷ ಸಮಾಲೋಚನಾ ಸಭೆ ನಡೆಯಿತು.

ಕರ್ನಾಟಕ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕುರಾಯರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಕನ್ನಡ ಹೋರಾಟಗಾರ, ನಿವೃತ್ತ ಶಿಕ್ಷಕ ಪುರುಷೋತ್ತಮ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ಭಾಷಾ ನೀತಿ(ಮಲೆಯಾಳ ಕಡ್ಡಾಯ ಕಲಿಕೆ)ಯಿಂದಾಗಿ ಗಡಿನಾಡಿನ ಅಲ್ಪಸಂಖ್ಯಾತ ಕನ್ನಡಿಗರ ಮೇಲಾಗುವ ಸಾಂವಿಧಾನಿಕ ಹಕ್ಕಿನ ಕಸಿಯುವಿಕೆಯ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕುರಾಯ ಚರ್ಚೆಯಲ್ಲಿ ಮೂಡಿಬಂದ ಒಮ್ಮತದ ತೀರ್ಮಾನದಂತೆ ನಿರ್ಣಯಗಳನ್ನು ಘೋಷಿಸಿದರು.

ನಿರ್ಣಯಗಳು
1.ಗಡಿನಾಡು ಕಾಸರಗೋಡಿನ ಅಲ್ಪಸಂಖ್ಯಾತ ಕನ್ನಡಿಗರ ಸಾಂವಿಧಾನಿಕ ಹಕ್ಕಿನ ಬಗ್ಗೆ ರಾಜ್ಯದ ಮುಖ್ಯಮಂತ್ರಿಗೆ ನಿಯೋಗದ ಮೂಲಕ ತೆರಳಿ ಮನವರಿಕೆ ಮಾಡಲು ತೀರ್ಮಾನಿಸಲಾಯಿತು. ಜಿಲ್ಲೆಯ ಉಸ್ತುವಾರಿ ಸಚಿವರೂ, ರಾಜ್ಯ ಕಂದಾಯ ಸಚಿವರೂ ಆದ ಇ.ಚಂದ್ರಶೇಖರನ್ ಹಾಗು ಜಿಲ್ಲೆಯ ಶಾಸಕರುಗಳೊಂದಿಗೆ ಮುಖ್ಯಮಂತ್ರಿಯನ್ನು ಭೇಟಿಯಾಗಲು ಸಭೆ ನಿರ್ಣಯ ಅಂಗೀಕರಿಸಿತು.
2.ಗಡಿನಾಡು ಕನ್ನಡಿಗರ ಸಂರಕ್ಷಣೆಯ ಜವಾಬ್ದಾರಿ ಬಗ್ಗೆ ಮನದಟ್ಟು ಮಾಡಿ, ಸುಗ್ರೀವಾಜ್ಞೆಯ ತಿದ್ದುಪಡಿಗೆ ಕರ್ನಾಟಕ ಸರಕಾರವು ಕೇರಳ ಸರಕಾರಕ್ಕೆ ಒತ್ತಡ ಹೇರಲು ಮತ್ತು ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲು ಕರ್ನಾಟಕದ ಮುಖ್ಯಮಂತ್ರಿಯನ್ನೂ ಭೇಟಿಯಾಗಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಜೊತೆಗೆ ಇತರ ರಾಜ್ಯಗಳ ಗಡಿ ಪ್ರದೇಶಗಳಲ್ಲಿರುವಂತೆ ಕಾಸರಗೋಡು ಗಡಿ ಜಿಲ್ಲೆಯ ಅಲ್ಪಸಂಖ್ಯಾತ ಕನ್ನಡಿಗರ ಸಂರಕ್ಷಣೆಗೆ ಉಸ್ತುವಾರಿ ಸಚಿವರನ್ನು ಕರ್ನಾಟಕ ಸರಕಾರ ನೇಮಕಗೊಳಿಸುವ ಬಗ್ಗೆ ಮನವಿಯಲ್ಲಿ ನಿವೇದಿಸಲು ತೀರ್ಮಾನಿಸಲಾಯಿತು.

3.ಸರಕಾರವು ಕನ್ನಡಿಗರ ಅಹವಾಲುಗಳನ್ನು ಮನ್ನಿಸದೆ ಸಾಂವಿಧಾನಿಕ ಹಕ್ಕುಚ್ಯುತಿಗೆ ಯತ್ನಿಸುವುದಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಜಿಪಂ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ. ಭಟ್, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಟಿ.ಡಿ.ಸದಾಶಿವ ರಾವ್, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು,ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು,ಕರ್ನಾಟಕ ಗಮಕಕಲಾ ಪರಿಷತ್ತಿನ ಕಾಸರಗೋಡು ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮಹಾಲಿಂಗೇಶ್ವರ ಭಟ್, ಸುರೇಶ್ ರಾವ್ ಕುಂಬಳೆ, ಎಂ. ಉಮೇಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕ ಸಂಘದ ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಜೋಗೀಂದ್ರನಾಥ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News