ತಪ್ಪೆಸಗುವ ಪೊಲೀಸರ ವಿರುದ್ಧ ಪ್ರಾಧಿಕಾರಕ್ಕೆ ದೂರು ನೀಡಿ: ನ್ಯಾ.ಪಾಚ್ಚಾಪುರೆ
ಉಡುಪಿ, ಎ.18: ಪೊಲೀಸರು ಕರ್ತವ್ಯ ನಿರ್ವಹಣೆ ವೇಳೆ ಮಾಡುವ ತಪ್ಪು, ಅಹಿತಕರ ವರ್ತನೆಗಳ ವಿರುದ್ಧ ಸಾರ್ವಜನಿಕರು ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಬಹುದಾಗಿದೆ. ಜಿಲ್ಲಾ ಎಸ್ಪಿಯವರು ಎಸಗುವ ಗಂಭೀರ ದುರ್ನಡತೆಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಪ್ರಾಧಿಕಾರಕ್ಕೆ ಇದೆ ಎಂದು ಕರ್ನಾಟಕ ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕರ್ನಾಟಕ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎ.ಎಸ್.ಪಾಚ್ಚಾಪುರೆ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಕೋರ್ಟ್ ಸಂಕೀರ್ಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾದ ‘ಪೊಲೀಸ್ ದೂರು ಪ್ರಾಧಿಕಾರ’ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪೊಲೀಸರು ಕಾನೂನು, ಕರ್ತವ್ಯ ಪಾಲನೆ ಸಂದರ್ಭ ಹಾಗೂ ಶಿಸ್ತು ಕ್ರಮ ಜರಗಿಸುವಾಗ ಎಚ್ಚರಿಕೆಯಿಂದ ಇರುವಂತೆ ಮಾಡಲು ಈ ಪ್ರಾಧಿಕಾರವು ಪೂರಕವಾಗಲಿದೆ. ಪೊಲೀಸ್ ಮಾತ್ರವಲ್ಲದೆ ಎಲ್ಲ ಇಲಾಖೆಯವರು ಸಾರ್ವ ಜನಿಕರೊಂದಿಗೆ ವರ್ತಿಸುವಾಗ ಎಚ್ಚರಿಕೆ ಹಾಗೂ ಪ್ರಾಮಾಣಿಕವಾಗಿ ವರ್ತಿಸ ಬೇಕು. ಈ ದೂರು ಪ್ರಾಧಿಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲಿದೆ ಎಂದರು.
ಕರ್ನಾಟಕ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜಯ್ ಸಹಾಯ್ ಮಾತನಾಡಿ, ಈವರೆಗೆ ದೂರು ಪ್ರಾಧಿಕಾರವು ರಾಜ್ಯ ದಲ್ಲಿ ಸರಾಸರಿ 300 ದೂರುಗಳನ್ನು ವಾರ್ಷಿಕವಾಗಿ ಸ್ವೀಕರಿಸುತ್ತಿದೆ. ವಕೀಲರು ತಮ್ಮಲ್ಲಿ ದೂರು ತರುವ ಸಾರ್ವಜನಿಕರಿಗೆ ಪೊಲೀಸ್ ದೂರು ಪ್ರಾಧಿಕಾರದ ಬಗ್ಗೆ ಮಾಹಿತಿ ನೀಡಬೇಕು. ಈ ಮೂಲಕ ವಕೀಲರು ರಾಯಭಾರಿಗಳಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕ ಟಿ. ಮಾತನಾಡಿ, ಯಾವ ಉದ್ದೇಶಕ್ಕಾಗಿ ಕಾನೂನುಗಳನ್ನು ರೂಪಿಸಲಾಗು ತ್ತದೆಯೋ ಅದರ ಅನುಷ್ಠಾನವು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ. ಪೊಲೀಸ್ ದೂರು ಪ್ರಾಧಿಕಾರ ಸಾರ್ವಜನಿಕರು ನೀಡಿದ ದೂರು ಗಳಿಗೆ ಸ್ಪಂದಿಸಿ ಕ್ರಮ ತೆಗೆದುಕೊಳ್ಳುವ ಕಾರ್ಯ ಮಾಡಬೇಕು. ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರವು ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯ ಎಂ.ಆರ್. ಕಾಂಬ್ಳೆ, ಉಡುಪಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ, ಬ್ರಹ್ಮಕುಮಾರಿ ಸೌರಭ ಉಪಸ್ಥಿತರಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಸ್ವಾಗತಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಸಂತೋಷ್ ಹೆಬ್ಬಾರ್ ವಂದಿಸಿದರು. ಉಪಾಧ್ಯಕ್ಷ ಪೃಥ್ವಿರಾಜ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಪ್ರಾಧಿಕಾರದ ವಿರುದ್ಧ ಜಡ್ಜ್ ಅಸಮಾಧಾನ
ಉಡುಪಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಕಾರ್ಯವೈಖರಿ ಹಾಗೂ ಪೊಲೀಸ್ ಇಲಾಖೆಯ ಕ್ರಮದ ಕುರಿತು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ ನಾಯ್ಕ ಟಿ., ವೇದಿಕೆಯಲ್ಲಿದ್ದ ಪ್ರಾಧಿಕಾರದ ಅಧ್ಯಕ್ಷರ ಮುಂದೆಯೇ ತಮ್ಮ ಅಸಮಾಧಾನವನ್ನು ಹೇಳಿಕೊಂಡರು.
ಪೊಲೀಸ್ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಬದಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸುತ್ತಿದ್ದಾರೆ. ಈವರೆಗೆ ಸಲ್ಲಿಕೆಯಾದ ಒಟ್ಟು 15-20 ದೂರುಗಳನ್ನು ಪೊಲೀಸ್ ದೂರು ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ. ಆದರೆ ಇದಕ್ಕೆ ಈವರೆಗೆ ಪೊಲೀಸ್ ಪ್ರಾಧಿಕಾರದಿಂದ ಯಾವುದೇ ಉತ್ತರ ಅಥವಾ ಹಿಂಬರಹ ಬಂದಿಲ್ಲ. ಯಾವುದೇ ಪ್ರಾಧಿಕಾರ ದೂರು ನೀಡಿದರೂ ಅದನ್ನು ತನಿಖೆ ಮಾಡಿ ಮಾಹಿತಿ ನೀಡಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಪೊಲೀಸರು ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ನ್ಯಾಯಾಧೀಶ ವೆಂಕಟೇಶ ನಾಯ್ಕ ದೂರಿದರು.
ಉಡುಪಿ ಜಿಲ್ಲೆಯ ನ್ಯಾಯಾಲಯಕ್ಕೆ ಸಂಬಂಧಿಸಿದ 500ಕ್ಕೂ ಅಧಿಕ ಜಾಮೀನು ರಹಿತ ಪ್ರಕರಣದ ಆರೋಪಿಗಳು ಊರಲ್ಲೇ ಇದ್ದರೂ ಪೊಲೀಸರು ಅವರನ್ನು ಬಂಧಿಸುವ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಉತ್ತರ ಅಥವಾ ಸ್ಪಂದನೆ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.