ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯ: ಕೇಂದ್ರದಿಂದ ಉತ್ತರ ಕೇಳಿದ ಸುಪ್ರೀಂ

Update: 2017-04-18 14:36 GMT

 ಹೊಸದಿಲ್ಲಿ,ಎ.18: ಶಾಲೆಗಳಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂ ಹಾಡುವಿಕೆಯನ್ನು ಕಡ್ಡಾಯಗೊಳಿಸುವಂತೆ ಸರಕಾರವನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿ ದಂತೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಕೇಂದ್ರಕ್ಕೆ ನೋಟಿಸ್ ಹೊರಡಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಆ.23ಕ್ಕೆ ನಿಗದಿಗೊಳಿಸಿದೆ.

ರಾಷ್ಟ್ರಗೀತೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಪ್ರತ್ಯೇಕ ಅರ್ಜಿಯ ಕುರಿತಂತೆ ಕೇಂದ್ರವು, ರಾಷ್ಟ್ರಗೀತೆಗೆ ಗೌರವದೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ಕೆಲವರು ಅದನ್ನು ಅಗೌರವಿಸಲು ಬಯಸಿರುವುದು ದುರದೃಷ್ಟಕರವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತು.
ರಾಷ್ಟ್ರಗೀತೆಯನ್ನು ಅಗೌರವಿಸುವವರನ್ನು ದಂಡಿಸಲು ಕಾನೂನು ರೂಪಿಸಬೇಕೆಂದು ಆಗ್ರಹಿಸಿರುವ ಅರ್ಜಿಯಲ್ಲಿ ಪರಿಷ್ಕರಣೆ ಮಾಡಲು ನ್ಯಾಯಾಲಯವು ಅರ್ಜಿದಾರರಿಗೆ ಅವಕಾಶ ನೀಡಿದೆ.

 ರಾಷ್ಟ್ರಗೀತೆಗೆ ನೀಡುವ ಗೌರವವನ್ನೇ ರಾಷ್ಟ್ರೀಯ ಗೀತೆಗೂ ನೀಡುವಂತೆ ಕೇಂದ್ರಕ್ಕೆ ನಿರ್ದೇಶ ಕೋರಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯು ಕಳೆದ ಫೆಬ್ರವರಿಯಲ್ಲಿ ತಿರಸ್ಕೃತಗೊಂಡಿತ್ತು. ಕಾನೂನಿನಡಿ ರಾಷ್ಟ್ರೀಯ ಗೀತೆಯ ಪರಿಕಲ್ಪನೆ ಇಲ್ಲವೆಂದು ಸರ್ವೋಚ್ಚ ನ್ಯಾಯಾಲಯವು ಆಗ ಅಭಿಪ್ರಾಯ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News