×
Ad

ನಿವೇಶನ ರಹಿತರಿಂದ "ಬೈಂದೂರು ಶಾಸಕರ ಮನೆ ಚಲೋ"

Update: 2017-04-18 20:09 IST

ಬೈಂದೂರು, ಎ.18: ಕರ್ನಾಟಕ ಕೃಷಿ ಕೂಲಿಕಾರರ ಸಂಘ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮನೆ ನಿವೇಶನಕ್ಕಾಗಿ ಬೈಂದೂರು "ಶಾಸಕರ ಮನೆ ಚಲೋ" ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಹೆಮ್ಮಾಡಿ ಪೇಟೆಯಲ್ಲಿ ಜರಗಿದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿಕೂಲಿಕಾರ ಸಂಘಟನೆ ಮುಖಂಡ ದಾಸ ಭಂಡಾರಿ, ಮನೆ ನಿವೇಶನ ಇಲ್ಲದವರು ಈ ದೇಶದಲ್ಲಿ ಬದುಕುತ್ತಿದ್ದರೂ ಓಟು ಪಡೆದು ಆಯ್ಕೆಯಾದ ಜನಪ್ರತಿನಿಧಿಗಳಿಗೆ ಮಾತ್ರ ನಿವೇಶನ ಇಲ್ಲದ ಬಡವರು ಪರಕೀಯರಾಗಿದ್ದಾರೆ. ಕೇರಳ ಸರಕಾರ ಪ್ರತಿಯೊಬ್ಬರಿಗೂ ಹಿತ್ತಲು ಸಹಿತ ಮನೆ ನೀಡಿ ಗೌರವಯುತ ಬದುಕು ಕೊಡಲು ಸಾಧ್ಯವಾಗಿರುವಾಗ ನಮ್ಮ ರಾಜ್ಯದ ಸರಕಾರಕ್ಕೆ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ ಬಡಜನರಿಗೆ ಸಿಗಬೇಕಾದ ನಿವೇಶನ ವನ್ನು ಕೊಡಲು ಶಾಸಕರಿಗೆ ಸಾಧ್ಯವಿದ್ದರೂ ಅವರು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಸಂಘಟನೆಯ ಮುಖಂಡ ಸುರೇಶ್ ಕಲ್ಲಾಗರ ಮಾತನಾಡಿ, ಆರು ವರ್ಷಗಳಿಂದ ನಿವೇಶನ ರಹಿತರು ನಿರಂತರವಾಗಿ ಹೋರಾಟ ನಡೆಸಿದರೂ ಕೇವಲ ಆಶ್ವಾಸನೆಗಳು ಸಿಕ್ಕಿವೆಯೇ ಹೊರತು ಭೂಮಿ ಸಿಗಲಿಲ್ಲ. ಭೂಮಿ ಸಿಗಲು ಬರೇ ಅಧಿಕಾರಿಗಳು ಮಾತ್ರ ಕೆಲಸ ಮಾಡಿದರೆ ಆಗೋದಿಲ್ಲ. ಬದಲಾಗಿ ಓಟು ಪಡೆದು ಅಧಿಕಾರಕ್ಕೆ ಬಂದಿರುವ ಶಾಸಕರಿಗೂ ಜವಾಬ್ದಾರಿ ಇರುತ್ತದೆ. ಅಧಿಕಾರಿಗಳ ಮುಖಾಂತರ ಕೆಲಸ ಮಾಡುವ ಇಚ್ಛಾಶಕ್ತಿಯೂ ಬೇಕಾಗಿದೆ ಎಂದರು.

ಸಿಐಟಿಯು ಜಿಲ್ಲಾ ಮುಖಂಡ ಬಾಲಕೃಷ್ಣ ಶೆಟ್ಟಿ, ತಾಲೂಕು ಅಧ್ಯಕ್ಷ ಎಚ್. ನರಸಿಂಹ, ಎಚ್.ವಿಠ್ಠಲ ಪೂಜಾರಿ, ರಮೇಶ್ ಪೂಜಾರಿ ಮಾತನಾಡಿದರು. ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಕಾರ್ಯದರ್ಶಿ ನಾಗರತ್ನ ನಾಡ ಸ್ವಾಗತಿಸಿದರು. ಬಳಿಕ ಹೆಮ್ಮಾಡಿ ಪೇಟೆಯಿಂದ ಮೆರವಣಿಗೆ ಹೊರಟ ಸಾವಿರಾರು ನಿವೇಶನ ರಹಿತರು ಕಟ್‌ಬೆಲ್ತೂರಿನಲ್ಲಿರುವ ಬೈಂದೂರು ಶಾಸಕ ಗೋಪಾಲ ಪೂಜಾರಿ ಮನೆ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಕೆ.ಶಂಕರ್, ಶಾಸಕರು ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಶಾಸಕರಿಗೆ ನಿವೇಶನ ರಹಿತರ ಕಷ್ಟಗಳ ಬಗ್ಗೆ ಅರಿವಿಲ್ಲ. ಇದ್ದಿದ್ದರೆ ಇಷ್ಟು ವರ್ಷ ಕಳೆದರೂ ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ಇನ್ನಾದರೂ ಶಾಸಕರು ನಿವೇಶನ ಹಂಚುವ ಕೆಲಸ ಮಾಡ ಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತ ನಾಡಿದ ಶಾಸಕ ಗೋಪಾಲ ಪೂಜಾರಿ, ಎ.26ರಂದು ತಹಶೀಲ್ದಾರ್, ಪಿಡಿಒ ಮುಂತಾದ ಅಧಿಕಾರಿಗಳ ಜಂಟಿ ಸಭೆಯನ್ನು ಕರೆದು ಸಮಸ್ಯೆಗಳನ್ನು ಶೀಘ್ರ ಇತ್ಯರ್ಥ ಪಡಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಾಜೀವ ಪಡುಕೋಣೆ, ಮಹಾಬಲ ವಡೇರಹೋಬಳಿ, ರಾಜೇಶ್ ವಡೇರಹೋಬಳಿ, ಸಂತೋಷ ಹೆಮ್ಮಾಡಿ, ಪದ್ಮಾ ವತಿ ಶೆಟ್ಟಿ, ಕುಶಲ, ಶೀಲಾವತಿ ಪಡುಕೋಣೆ ಮೊದಲಾದವರು ಉಪಸ್ಥಿತರಿ ದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News