ಟಿಪ್ಪು ಸುಲ್ತಾನ್ ಸ್ಮರಣೆಗಾಗಿ ಮೇ 4ರಂದು ಮೈಸೂರಿನಲ್ಲಿ ‘ಟಿಪ್ಪು ಜಾಗೃತಿ ಸಮಾವೇಶ’: ಕೆ.ಎಲ್.ಅಶೋಕ್
ಮಂಗಳೂರು, ಎ.18: ತನ್ನ ರಾಜ್ಯದ ರಕ್ಷಣೆಗಾಗಿ ವಸಾಹತುಶಾಹಿಯ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ಟಿಪ್ಪು ಸುಲ್ತಾನ್ ಸ್ಮರಣೆಗಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಾಗೂ ಸಮಾನಮನಸ್ಕ ಪ್ರಗತಿಪರ ಸಂಘಟನೆಗಳ ವತಿಯಿಂದ ಮೇ 4ರಂದು ಮೈಸೂರಿನಲ್ಲಿ ‘ಟಿಪ್ಪು ಜಾಗೃತಿ ಸಮಾವೇಶ’ ಆಯೋಜಿಸಲಾಗಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶಕ್ಕೆ ಮೊದಲು ಶ್ರೀರಂಗಪಟ್ಟಣದಿಂದ ಜಾಥಾ ನಡೆಯಲಿದೆ ಎಂದರು.
ಕ್ರಿ.ಶ.1799ರ ಮೇ 11ರಂದು ಟಿಪ್ಪು ಸುಲ್ತಾನ್ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುತ್ತಲೇ ರಣರಂಗದಲ್ಲಿ ಮಡಿದರು. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಟಿಪ್ಪು ಆಡಳಿತಾತ್ಮಕ ಸುಧಾರಣೆಯನ್ನು ತಂದ ಕ್ರಾಂತಿಕಾರಿ ದೊರೆ. ಭೂಸುಧಾರಣೆ, ಸೈನಿಕರಿಗೆ ಭೂಮಿ ಹಂಚಿಕೆ, ನೀರಾವರಿ ಹಾಗೂ ಅಭಿವೃದ್ಧಿಯ ದೂರಗಾಮಿ ಚಿಂತನೆಯ ನೀತಿ, ಆರ್ಥಿಕ ಮುನ್ನೋಟ, ಧಾರ್ಮಿಕ ಸಹಿಷ್ಣುತೆಯ ಟಿಪ್ಪುವಿನ ಆಡಳಿತ ಎಲ್ಲಾ ರಾಜಕೀಯ ಪಕ್ಷಗಳಿಗೆ ಮಾದರಿಯಾಗಬೇಕಾಗಿದೆ. ಮದ್ಯಪಾನ ವಿರೋಧಿ ನಿಲುವು, ಸ್ತ್ರೀ ಪರವಾದ ಚಿಂತನೆ, ಕರ ಕುಶಲಕರ್ಮಿಗಳು, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಸಮಾಜ ಮುಖಿ ಸಾರ್ವಕಾಲಿಕ ಚಿಂತನೆಯಾಗಿದೆ. ಆದರೆ ಟಿಪ್ಪುವಿನ ಈ ಚಿಂತನೆಯನ್ನು ಅನುಮಾನದ ದೃಷ್ಟಿಯಿಂದ, ಕೋಮುವಾದದ ನೆಲೆಯಲ್ಲಿ ನೋಡಲಾಗುತ್ತಿದೆ. ಇದನ್ನು ಹೋಗಲಾಡಿಸಲು ಮತ್ತು ಈ ಬಗ್ಗೆ ಮತ್ತೊಮ್ಮೆ ಜನ ಜಾಗೃತಿ ಮೂಡಿಸಲು ಈ ದಿನವನ್ನು ಆಯ್ಕೆ ಮಾಡಲಾಗಿದೆ ಎಂದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯೊಂದಿಗೆ ಮೈಸೂರಿನ ಪ್ರಗತಿಪರ ಸಂಘಟನೆಗಳು 20 ದಿನಗಳ ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಹಲವು ಕಡೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಜನಸಾಮಾನ್ಯರ ದೃಷ್ಟಿಯಲ್ಲಿ ಜನಪ್ರಿಯ ರಾಜನಾಗಿ ಉಳಿದುಕೊಂಡಿರುವ ಟಿಪ್ಪುವಿನ ಬಗ್ಗೆ ಅವರ ಅಭಿಮಾನದ ಸಂಕೇತವಾಗಿ ಕಟ್ಟಿ ಹಾಡುತ್ತಿರುವ ಲಾವಣಿ, ನಾಟಕ, ಕಿರುಪುಸ್ತಕ ಹಾಗೂ ಇತರ ಸಾಹಿತ್ಯ ಪ್ರಾಕಾರಗಳ ಪ್ರದರ್ಶನ ನಡೆಯಲಿದೆ ಎಂದರು.
ಮೇ 4ರಂದು ಅಭಿಯಾನದ ಸಮಾರೋಪ ಸಮಾರಂಭ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯಲಿದೆ. ಸಮಾವೇಶದಲ್ಲಿ ಮೈಸೂರು ಜಿಲ್ಲೆ ಹಾಗೂ ರಾಜ್ಯದ ಇತರ ಕಡೆಗಳಿಂದ ಆಗಮಿಸಿದ ಐದರಿಂದ ಆರು ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಕೆ.ಎಲ್.ಅಶೋಕ್ ತಿಳಿಸಿದ್ದಾರೆ
ಸುದ್ದಿಗೊಷ್ಠಿಯಲ್ಲಿ ಕಕೋಸೌವೇ ದ.ಕ. ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್, ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ದ.ಕ. ಜಿಲ್ಲಾ ಎಸ್‌ಐಒ ಅಧ್ಯಕ್ಷ ತಲ್ಹಾ ಇಸ್ಮಾಯೀಲ್, ಸಾಮಾಜಿಕ ಕಾರ್ಯಕರ್ತ ನಿರ್ಮಲ್ ಕುಮಾರ್, ಶಬ್ಬೀರ್ ಮೊದಲಾದವರು ಉಪಸ್ಥಿತರಿದ್ದರು