ತುಳು ಸಿನಿಮಾಕ್ಕೆ ತುಳುವರ ಪ್ರೋತ್ಸಾಹ ಅತ್ಯಗತ್ಯ: ಅರ್ಜುನ್ ಕಾಪಿಕಾಡ್

Update: 2017-04-18 15:38 GMT

ಕೊಣಾಜೆ, ಎ.18: ತಮಿಳು, ಮಲಯಾಳಂ ಸಿನಿಮಾಗಳಿಗೆ ಆ ಭಾಷಿಕರು ಪ್ರೋತ್ಸಾಹ ನೀಡುವಂತೆ ತುಳುವರು ಕೂಡಾ ತುಳು ಸಿನಿಮಾವನ್ನು ಪ್ರೋತ್ಸಾಹಿಸಿ, ಬೆಳೆಸಬೇಕು ಎಂದು ಚಿತ್ರನಟ ಅರ್ಜುನ್ ಕಾಪಿಕಾಡ್ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಇದರ ಆಶ್ರಯದಲ್ಲಿ ವಿವಿ ಕ್ಯಾಂಪಸ್ಸಿನ ಮಂಗಳ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಅಂತರ್ ವಿಭಾಗೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ‘ ಸಂಭ್ರಮ -2017 ’ ಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ ಬೈರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿನಿಮಾ ಮನರಂಜಕವಾಗಿ ಕಂಡರೂ ಅದರ ಹಿಂದೆ ಕಲಾವಿದರ ಶ್ರಮ, ತ್ಯಾಗ ಬಹಳಷ್ಟಿರುತ್ತದೆ. ಕುಟುಂಬದವರನ್ನು ಬಿಟ್ಟು ರಾತ್ರಿ ಹಗಲು ನಟನೆಯಲ್ಲಿರುತ್ತಾರೆ. ಇದನ್ನು ಸಂಬಂಧಿ ಕನ್ನಡ ಚಿತ್ರರಂಗದ ಪುನೀತ್ ರಾಜ್ ಕುಮಾರ್ ಅವರಿಂದ ಕಂಡಿದ್ದೇನೆ. ಅಲ್ಲದೆ ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ಸಿನಲ್ಲಿ ನಟಸಾರ್ವಭೌಮ ರಾಜ್ ಕುಮಾರ್ ಶೂಟಿಂಗ್ ಸಮಯದಲ್ಲಿ ವಿಶ್ರಾಂತಿಗೆಂದು ಸ್ಥಳದಲ್ಲಿದ್ದ ಬೆಂಚನ್ನೇ ಆಶ್ರಯಿಸಿ ಮಲಗಿರುವುದು ಕಣ್ಣಾರೆ ಕಂಡಿರುವುದಾಗಿ ತಿಳಿಸಿದ ಅವರು, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವುದರ ಮುಖೇನ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್ ಅವರನ್ನು ಮಂಗಳೂರು ವಿವಿ ವತಿಯಿಂದ ಸನ್ಮಾನಿಸಲಾಯಿತು.

ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ.ಎಂ . ಲೋಕೇಶ್, ಅಧ್ಯಕ್ಷ ದಿವಾಕರ್ ಶೆಟ್ಟಿ, ಉಪಾಧ್ಯಕ್ಷ ಶ್ಯಾಮಪ್ರಸಾದ್, ಪದಾಧಿಕಾರಿಗಳಾದ ಸುನೀಲ್ ಕೆ.ಎಂ, ವೀರೇಂದ್ರ ಮೊಗವೀರ, ಸುಕ್ಷಿತಾ ರಾವ್.ಬಿ, ಅಶೋಕ್. ಆರ್ ಉಪಸ್ಥಿತರಿದ್ದರು

ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ. ಬಾರ್ಕೂರು ಉದಯ ಸ್ವಾಗತಿಸಿದರು. ಮಂಗಳೂರು ವಿವಿ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಶ್ಯಾಂ ಪ್ರಸಾದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News