ಉಡುಪಿ ಜಿಲ್ಲೆಗೆ ಅನುದಾನದಲ್ಲಿ 12 ಕೋಟಿ ರೂ. ಹೆಚ್ಚಳ
ಉಡುಪಿ, ಎ.18: 2017-18ನೆ ಸಾಲಿನಲ್ಲಿ ಉಡುಪಿ ಜಿಲ್ಲೆಗೆ ಒಟ್ಟು 434.21 ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಈ ಪೈಕಿ 148.60 ಕೋಟಿ ರೂ. ಜಿಪಂ ಕಾರ್ಯಕ್ರಮಗಳಿಗೆ, 267.84 ಕೋಟಿ ರೂ. ತಾಪಂ ಕಾರ್ಯಕ್ರಮಗಳಿಗೆ ಹಾಗೂ 17.76 ಕೋಟಿ ರೂ. ಗ್ರಾಪಂ ಕಾರ್ಯಕ್ರಮಗಳಿಗೆ ಅನುದಾನ ನಿಗದಿಯಾಗಿದೆ.
2016-17ನೆ ಸಾಲಿನಲ್ಲಿ ಉಡುಪಿ ಜಿಲ್ಲೆಗೆ ಒಟ್ಟು 421.56 ಕೋಟಿ ರೂ. ಅನುದಾನ ದೊರಕಿದ್ದರೆ, ಈ ಬಾರಿ 12 ಕೋಟಿ ರೂ.ಹೆಚ್ಚಳವಾಗಿದೆ. ನಿಗದಿಯಾದ ಒಟ್ಟು ಅನುದಾನದಲ್ಲಿ 232.46 ಕೋಟಿ ರೂ. ಶಿಕ್ಷಣ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ವೇತನಕ್ಕೆ ಸಂದಾಯವಾದರೆ,ಉಳಿದ 201.64 ಕೋಟಿ ರೂ. ವೇತನೇತರ ಕಾರ್ಯಕ್ರಮಗಳಿಗೆ ಸಂಬಂಧಿಸಿದ್ದಾಗಿದೆ.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು249.09 ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಇದರಲ್ಲಿ 166.14 ಕೋಟಿ ರೂ. ಶಿಕ್ಷಕರು ಹಾಗೂ ಅಧಿಕಾರಿಗಳ ವೇತನಕ್ಕೆ, 23.24 ಕೋಟಿ ರೂ. ಅಕ್ಷರದಾಸೋಹ ಕಾರ್ಯಕ್ರಮಕ್ಕೆ, 50 ಲಕ್ಷ ರೂ. ಪ್ರೌಢಶಾಲಾ ಕಟ್ಟಡಗಳ ದುರಸ್ತಿಗೆ, ಶಾಲೆಯ ಸಾಮಗ್ರಿ ಸರಬರಾಜು ಕಾರ್ಯಕ್ರಮಕ್ಕೆ 26 ಲಕ್ಷ ರೂ., ತಾಪಂ ಕಾರ್ಯಕ್ರಮದಡಿ ಪ್ರಾಥಮಿಕ ಶಾಲೆಗಳ ದುರಸ್ತಿಗೆ 50 ಲಕ್ಷ ರೂ.ನಿಗದಿಯಾಗಿದೆ.
ಆರೋಗ್ಯ ಇಲಾಖೆಗೆ 23.15 ಕೋಟಿ ರೂ. ಅನುದಾನ ನಿಗದಿಯಾಗಿದ್ದು, ಅದರಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಕ್ಕೆ 13.77 ಕೋಟಿ ರೂ., ಆರೋಗ್ಯ ಇಲಾಖೆಯ ಕಟ್ಟಡಗಳ ನಿರ್ವಹಣೆಗೆ 50 ಲಕ್ಷ ರೂ., ಆಯುಷ್ ಇಲಾಖೆಯ ಕಟ್ಟಡಗಳ ನಿರ್ವಹಣೆಗೆ 15 ಲಕ್ಷ ರೂ., ಜಿಲ್ಲಾ ಆರೋಗ್ಯ ಕಚೇರಿ ಕಟ್ಟಡಕ್ಕೆ 20 ಲಕ್ಷ ರೂ. ನಿಗದಿಯಾಗಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ 40.51 ಕೋಟಿ ರೂ. ನಿಗದಿಯಾಗಿದ್ದು, ಇದರಲ್ಲಿ ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ವಿದ್ಯಾರ್ಥಿನಿ ನಿಲಯಗಳ ನಿರ್ವಹಣೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಅನುದಾನ ನಿಗದಿಪಡಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಾರ್ಯಕ್ರಮಗಳಿಗೆ 20.03 ಕೋಟಿ ರೂ., ಪೌಷ್ಠಿಕ ಆಹಾರಕ್ಕಾಗಿ 19.82 ಕೋಟಿ ರೂ. ಅನುದಾನ ನಿಗದಿಯಾಗಿದೆ.
ತಾಪಂ ಕಾರ್ಯಕ್ರಮದಡಿ ಅಂಗನವಾಡಿ ದುರಸ್ತಿಗಾಗಿ 80 ಲಕ್ಷ ರೂ., ಸಸ್ಯ ಸಂಗೋಪನೆ ವಲಯದಡಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಕಾರ್ಯಕ್ರಮಗಳಿಗೆ ಮತ್ತು ಭೂಸಾರ ಸಂರಕ್ಷಣೆಗೆ ಸೇರಿ ಒಟ್ಟು 3.26 ಕೋಟಿ ರೂ.ಅನುದಾನ ನಿಗದಿಯಾಗಿದೆ. ಕೃಷಿ, ತೋಟಗಾರಿಕಾ ಇಲಾಖಾ ಕಟ್ಟಡಗಳ ದುರಸ್ತಿಗೆ 17 ಲಕ್ಷ ರೂ., ತೋಟಗಾರಿಕಾ ಕ್ಷೇತ್ರಗಳ ನಿರ್ವಹಣೆಗೆ 10 ಲಕ್ಷ ರೂ., ತಾಳೆ ಎಣ್ಣೆಯ ಅಭಿವೃದ್ಧಿಗಾಗಿ 3.60 ಲಕ್ಷ ರೂ., ಇತರೆ ಕೃಷಿ ಯೋಜನೆಯಡಿ ಯಂತ್ರೋಪಕರಣಗಳಿಗೆ 24.60 ಲಕ್ಷ ರೂ., ನಿಗದಿಯಾಗಿದೆ.
ಪಶುಸಂಗೋಪನಾ ಇಲಾಖೆಗೆ 2.25 ಕೋಟಿ ರೂ. ಅನುದಾನ ನಿಗದಿ ಯಾಗಿದ್ದು, ಔಷಧಿ ಹಾಗೂ ರಾಸಾಯನಿಕಗಳ ಸರಬರಾಜಿಗೆ 44.48 ಲಕ್ಷ ರೂ., ಕಟ್ಟಡಗಳಿಗೆ 26 ಲಕ್ಷ ರು., ಗಿರಿರಾಜ ಹಕ್ಕಿಗಳ ಸಾಕಣಿಕೆಗೆ 7.20 ಲಕ್ಷ ರೂ. ನಿಗದಿಯಾಗಿದೆ. ಮೀನುಗಾರಿಕಾ ಇಲಾಖೆಗೆ 92.91 ಲಕ್ಷ, ಸಾಮಾಜಿಕ ಅರಣ್ಯ ಇಲಾಖೆಗೆ 1.44 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಿಗೆ 37.95 ಕೋಟಿ ರೂ. ಇದ್ದು, ಇದರಲ್ಲಿ ಜಿಪಂ ಕಚೇರಿ ಕಟ್ಟಡ ನಿರ್ವಹಣೆಗೆ 1.ಕೋ ರೂ., ತಾಪಂ ಅಭಿವೃದ್ಧಿ ಅನುದಾನ ತಾಲೂಕಿಗೆ ತಲಾ ಒಂದು ಕೋಟಿಯಂತೆ ಒಟ್ಟು ಮೂರು ಕೋಟಿ ರೂ., ಗ್ರಾಪಂಗಳಿಗೆ ನಿರ್ಬಂಧ ರಹಿತ ಅನುದಾನ 16.89 ಕೋಟಿ ರೂ.ನಿಗದಿಯಾಗಿದೆ.
ಸಣ್ಣ ನೀರಾವರಿ ವಲಯದಡಿ ವಾರ್ಷಿಕ ನಿರ್ವಹಣೆಗಾಗಿ 26.75 ಲಕ್ಷ ರೂ., ಗ್ರಾಪಂ ವ್ಯಾಪ್ತಿಯಲ್ಲಿ ಕೆರೆಗಳ ನಿರ್ವಹಣೆಗೆ 40 ಲಕ್ಷ ರೂ. ನಿಗದಿಯಾಗಿದೆ. ಜೈವಿಕ ಅನಿಲ ಸ್ಥಾವರ ನಿರ್ಮಾಣಕ್ಕೆ 40 ಲಕ್ಷ ರೂ. ಅನುದಾನವನ್ನು ಇರಿಸಲಾಗಿದೆ. ಗ್ರಾಮೀಣ ಮತ್ತು ಸಣ್ಣ ಉದ್ಯಮ ವಲಯಕ್ಕೆ 85.26 ಲಕ್ಷ ರೂ. ನಿಗದಿಯಾಗಿದ್ದು, ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ಉಚಿತ ಸರಬರಾಜಿಗೆ 5 ಲಕ್ಷ ರೂ., ಜೇನು ಸಾಕಣಿಕೆಗೆ 5.64 ಲಕ್ಷ ರೂ.ಮೀಸಲಾಗಿದೆ.
ಮುಖ್ಯಮಂತ್ರಿಗಳ ರಸ್ತೆ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗೆ 750 ಲಕ್ಷ ರೂ. ಅನುದಾನ ನಿಗದಿಯಾಗಿದೆ. ಈ ಅನುದಾನಕ್ಕೆ ಸರಿಯಾಗಿ ಕ್ರಿಯಾ ಯೋಜನೆ ತಯಾರಿಸಿ ಕಾರ್ಯಕ್ರಮ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಉಡುಪಿ ಜಿಪಂನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.