ಮಸೀದಿಗಳ ಪ್ರಾವಿತ್ರ್ಯತೆ ಗೌರವಿಸಿ: ಮುಳ್ಳೂರುಕೆರೆ ಸಖಾಫಿ
ಮಂಗಳೂರು, ಎ.18: ಮಸೀದಿಗಳು ಅಲ್ಲಾಹನ ಆರಾಧನಾಲಯವಾಗಿದ್ದು, ಇಂತಹ ಮಸೀದಿಗಳ ಪಾವಿತ್ರ್ಯತೆಯನ್ನು ಕಾಪಾಡಿ ಗೌರವಿಸುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಬೇಕು ಎಂದು ಕೇರಳದ ಖ್ಯಾತ ವಿದ್ವಾಂಸ ಮುಳ್ಳೂರುಕೆರೆ ಮುಹಮ್ಮದ್ ಅಲಿ ಸಖಾಫಿ ಹೇಳಿದ್ದಾರೆ.
ಬೈಕಂಪಾಡಿ ಸಮೀಪದ ಅಡ್ಕಾ ಹಝ್ರತ್ ಶೇಖ್ ಮಹ್ಮೂದ್ ವಲಿಯುಲ್ಲಾಹ್ ಉರೂಸ್ ಮತ್ತು ನವೀಕೃತ ಗೌಸಿಯಾ ಮಸೀದಿ ಹಾಗೂ ದರ್ಗಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ನಾಲ್ಕನೆ ದಿನವಾದ ಮಂಗಳವಾರ ಧಾರ್ಮಿಕ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.
ಆರಾಧನಾಲಯಗಳು ದೇವನ ಅನುಗ್ರಹಿತ ತಾಣಗಳಾಗಿವೆ. ಮಸೀದಿಗಳ ಹೆಸರಿನಲ್ಲಾಗಲಿ ಅಥವಾ ಮಸೀದಿಗಳ ಆಡಳಿತಕ್ಕಾಗಿ ಕಚ್ಚಾಟ ನಡೆಸುವುದು ಧರ್ಮ ಬಾಹಿರ ಕೆಲಸವಾಗಿದ್ದು, ಇಂತಹ ಕೃತ್ಯಗಳು ದೇವನ ಕ್ರೋಧಕ್ಕೆ ಪಾತ್ರವಾಗುತ್ತದೆ. ಆದ್ದರಿಂದ ದೇವನಿಗೆ ಅನಿಷ್ಠವಾಗಿರುವ ಇಂತಹ ಕಾರ್ಯಗಳಿಂದ ದೂರ ಉಳಿಯುವಂತೆ ಅವರು ಸಲಹೆ ನೀಡಿದರು.
ತಲಾಖ್ ವಿಷಯವನ್ನು ಪ್ರಸ್ತಾಪಿಸಿದ ಅವರು, ದಾಂಪತ್ಯ ಜೀವನದಲ್ಲಿ ವಿಚ್ಛೇದನ ವಿಷಯ ಏರ್ಪಟ್ಟಾಗ ಇಸ್ಲಾಮಿನ ನೀತಿ, ನಿಯಮಗಳು ಪಾಲಿಸಲಾಗಿದೆ ಎಂದು ಖಾತರಿಯಾದಾಗ ಮತ್ತು ಅದನ್ನು ಜಮಾಅತ್ ಪರಿಶೀಲನೆಗೊಳಪಡಿಸಿದ ನಂತರವೇ ತಲಾಖ್ ಅನ್ವಯವಾಗಬೇಕಾಗಿದೆ. ಈ ಬಗ್ಗೆ ಮುಸ್ಲಿಮರಲ್ಲಿ ಜಾಗೃತಿ ಅಗತ್ಯವಾಗಿದೆ ಎಂದು ಹೇಳಿದರು.
ಬೈಕಂಪಾಡಿ ಜುಮಾ ಮಸೀದಿ ಸಮಿತಿಯ ಅಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿಸ್ಟಾರ್ ಅಧ್ಯಕ್ಷತೆ ವಹಿಸಿದ್ದರು. ಅಂಗರಗುಂಡಿ ಬದ್ರಿಯಾ ಮಸೀದಿಯ ಸದರ್ ಯಹ್ಯಾ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಟಿಪಳ್ಳ ಜುಮಾ ಮಸೀದಿ ಸಮಿತಿಯ ಅಧ್ಯಕ್ಷ ಮುಹಮ್ಮದ್ ಶಮೀಮ್, ಬೈಕಂಪಾಡಿ ಅಡ್ಕಾ ಗೌಸಿಯಾ ಮಸೀದಿಯ ಇಮಾಮ್ ಎನ್.ಡಿ.ಅಬ್ದುರ್ರಹ್ಮಾನ್ ಮದನಿ, ಬೈಕಂಪಾಡಿ ಜುಮಾ ಮಸೀದಿ ಸಮಿತಿಯ ಕಾರ್ಯದರ್ಶಿ ಸೈದುದ್ದೀನ್ ಉಪಸ್ಥಿತರಿದ್ದರು.
ಬೈಕಂಪಾಡಿ ಜುಮಾ ಮಸೀದಿಯ ಖತೀಬ್ ಹೈದರ್ ಅಲಿ ಸಖಾಫಿ ದುಆ ನೆರವೇರಿಸಿದರು. ಬೈಕಂಪಾಡಿ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯ ಬಿ.ಎ.ಖಾದರ್ ಶಾ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸಮೀರ್ ಕಾರ್ಯಕ್ರಮ ನಿರೂಪಿಸಿದರು.