×
Ad

ಒಂದೇ ಕುಟುಂಬದ 20 ವೈದ್ಯರಿಂದ ವೈದ್ಯಕೀಯ ಶಿಬಿರ

Update: 2017-04-18 23:13 IST

ಕಾನೂನು, ವೈದ್ಯಕೀಯ ಸೇವೆಯಲ್ಲಿರುವ ಕುಟುಂಬ ನಮ್ಮೂರಿನ ಹೆಮ್ಮೆ: ಶಕುಂತಳಾ ಶೆಟ್ಟಿ 

ಮಾಣಿಲ, ಎ.18: ಸಾಮಾಜಿಕ ಕಳಕಳಿಯಿಂದ ವಿವಿಧ ಸಂಘಟನೆಗಳು ಹಾಗೂ ಸಂಸ್ಥೆಗಳ ಸಹಯೋಗದಲ್ಲಿ, ನೆರವಿನಲ್ಲಿ ಉಚಿತ ವೈದ್ಯಕೀಯ ಶಿಬಿರಗಳು ಸಾಮಾನ್ಯವಾಗಿ ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಇವೆಲ್ಲದರ ನಡುವೆ ಕುಟುಂಬ ಸಮ್ಮಿಲನದ ಹಿನ್ನೆಲೆಯಲ್ಲಿ, ಹಿರಿಯರ ನೆನಪಿನಲ್ಲಿ ಒಂದೇ ಕುಟುಂಬದ ಸುಮಾರು 20 ವೈದ್ಯರಿಂದ ನಡೆದ ವಿಶಿಷ್ಟ ವೈದ್ಯಕೀಯ ಶಿಬಿರಕ್ಕೆ ಮಾಣಿಲ ಗ್ರಾಮದ ಪಕಳಕುಂಜ‌ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ. 

ದಿವಂಗತ ಮೊಹಿದೀನ್ ಕುಟ್ಟಿಹಾಜಿ ನಾಯರ್ಮೂಲೆ ಮತ್ತು ಬೀಫಾತಿಮ ಹಜ್ಜುಮ್ಮ ಹಾಗೂ ಹಿರಿಯರ ಸವಿನೆನಪಿನಲ್ಲಿ ನಾಯರ್ಮೂಲೆ ಕುಟುಂಬ ಆಯೋಜಿಸಿದ್ದ "ಗೆಟ್ ಟುಗೆದರ್" (ಸಮ್ಮಿಲನ) ಕಾರ್ಯಕ್ರಮದಲ್ಲಿ ಇದೇ ಮನೆತನದ ಸುಮಾರು 20 ವೈದ್ಯರು ಉಚಿತ ಮೆಗಾ ಹೆಲ್ತ್ ಕ್ಯಾಂಪನ್ನು ಆಯೋಜಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಕಾರ್ಯಕ್ರಮವನ್ನು ಕುಟುಂಬದವರೇ ಆದ ಹಿರಿಯ ವೈದ್ಯ, ಯೆನೆಪೊಯ ಮೆಡಿಕಲ್ ಕಾಲೇಜಿನ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್ . ಮೂಸಬ್ಬ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿ, "ಇದು ನಾನು ಕಂಡ ಕಾರ್ಯಕ್ರಮಗಳಲ್ಲೇ ವಿಶಿಷ್ಟವಾದುದು. ಒಂದು ಕುಟುಂಬದ ವೈದ್ಯರು ಸೇರಿ ಸಾಮಾಜಿಕ ಕಳಕಳಿಯಿಂದ ಆರೋಗ್ಯ ಶಿಬಿರವೊಂದನ್ನು ನಡೆಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ಕಾನೂನು ಹಾಗೂ ವೈದ್ಯಕೀಯ ಸೇವೆಯಲ್ಲಿರುವ ಈ ಕುಟುಂಬ ನಮ್ಮ ಊರಿಗೆ ಹೆಮ್ಮೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಮಾತನಾಡಿ, ಈ ಕಾರ್ಯಕ್ರಮ ಈ ಭಾಗದ ಜನತೆಗೆ ದೊರೆಯುವ ಒಂದು ಅತ್ಯುತ್ತಮ ಅವಕಾಶವಾಗಿದೆ. ಇಂತಹ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ ಕುಟುಂಬವನ್ನು ತಾನು ಅಭಿನಂದಿಸುತ್ತೇನೆ ಎಂದರು. 

ಕರ್ನಾಟಕ ಅಡ್ಮಿನಿಸ್ಟ್ರೇಶನ್ ಟ್ರಬ್ಯುನಲ್ ಇದರ ನಿವೃತ್ತ ನ್ಯಾಯಾಧೀಶ ಜಸ್ಟೀಸ್ ಮೂಸಾಕುಂಞಿ ನಾಯರ್ಮೂಲೆ, ಇಂದಿರಾಗಾಂಧಿ ಕೋ- ಆಪರೇಟಿವ್ ಆಸ್ಪತ್ರೆ ಹಾಗೂ ತಲಶ್ಶೇರಿಯ ಮೆಡಿಕಲ್ ಡೈರೆಕ್ಟರ್ ಡಾ.ಸಿದ್ದೀಕ್ ಹಾಗೂ ಪಕಳಕುಂಜ ಶಾಲಾ ಮುಖ್ಯೋಪಾಧ್ಯಾಯ ಮದನಮೋಹನ್ ಈ ಸಂದರ್ಭ ಮಾತನಾಡಿದರು.

ನಾಯರ್ಮೂಲೆ ಕುಟುಂಬದ ಹಿರಿಯರೂ, ಜಮಾಅತ್  ಅಧ್ಯಕ್ಷರೂ ಆದ ಮುಹಮ್ಮದ್ ಹಾಜಿ ನಾಯರ್ಮೂಲೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಧ್ಯಾಪಕರಾದ ಹಾಜಿ ಪಕ್ರಬ್ಬ ಮಾಸ್ಟರ್, ಕಾಯಿಞಿ ಹಾಜಿ ನಾಯರ್ಮೂಲೆ, ಕೇಂದ್ರ ಸರಕಾರದ ಆಹಾರ ಇಲಾಖೆಯ ನಿವೃತ್ತ ಅಧಿಕಾರಿ ಹಾಜಿ ಇಬ್ರಾಹೀಂ ನಾಯರ್ಮೂಲೆ, ಅಬ್ದುಲ್ ಖಾದರ್ ಹಾಜಿ ತಲೆಕಳ, ಬಾಪಂಕುಂಞಿ,  ಮರಿಯಮ್ಮ ಹಜ್ಜುಮ್ಮ ಮದನೋಡಿ, ನಫೀಸಾ ಹಜ್ಜುಮ್ಮ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಡಾ.ಎಂ.ಎಸ್. ಮೂಸಬ್ಬ ಅವರು ಸುಮಾರು 65, ಮೆಡಿಸಿನ್ ವಿಭಾಗದಲ್ಲಿ ಡಾ.ಸಲ್ಮಾ ಸುಹಾನ ಹಾಗೂ ಡಾ.ಶಮ್ನಾ ಮೂಸಬ್ಬ ಸುಮಾರು 62, ಮಕ್ಕಳ ವಿಭಾಗದಲ್ಲಿ ಡಾ.ಸಿದ್ದೀಕ್ ಕೆ.ಪಿ.ಎ. ಹಾಗೂ ಡಾ.ಬಶೀರ್ ಅಬ್ದುಲ್ಲ ಸುಮಾರು 58, ಕಣ್ಣಿನ ವಿಭಾಗದಲ್ಲಿ ಡಾ.ತಾಹಿರಾ ಸಿದ್ದೀಕ್ ಸುಮಾರು 114 ಹಾಗೂ ದಂತ ವಿಭಾಗದಲ್ಲಿ ಡಾ.ಅಲಿ, ಡಾ.ಶಕೀಲ್ ಮೊಹಿದೀನ್ ಹಾಗೂ ಡಾ.ಸನಾ‌ ಸುಮಾರು 103 ಜನರಿಗೆ ಸೇರಿದಂತೆ ಒಟ್ಟು 400 ಮಂದಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು‌ ಚಿಕಿತ್ಸೆ ನೀಡಲಾಯಿತು. ಸುಮಾರು 45 ಮಂದಿ‌ ಇಸಿಜಿ ಸೌಲಭ್ಯ ಪಡೆದುಕೊಂಡರು.

ಇದೇ ಸಂದರ್ಭ ಡೆಂಟಲ್ ಕಿಟ್ ಸೇರಿದಂತೆ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ರೂ.ಗಳಿಗೂ ಅಧಿಕ ಮೌಲ್ಯದ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು. ಕಣ್ಣಿನ ವಿಭಾಗದಲ್ಲಿ ಕನ್ನಡಕ ಹಾಗೂ ಪೊರೆಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ಹೆಸರನ್ನು ಸ್ವೀಕರಿಸಲಾಗಿದ್ದು, ಶೀಘ್ರವೇ ಅದನ್ನು ವಿತರಿಸಲಾಗುವುದು ಎಂದು ನಿರ್ದೇಶಕ ಡಾ.ಬದ್ರುದ್ದೀನ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಹಾಗೂ ಶಿಬಿರದ ನಿರ್ದೇಶಕ ಡಾ. ಬದ್ರುದ್ದೀನ್ ಸ್ವಾಗತಿಸಿದರು. ಅಡ್ವಕೇಟ್ ರಾಶಿಫ್ ನಾಯರ್ಮೂಲೆ ಹಾಗೂ ಅಡ್ವಕೇಟ್ ಶಮೀಲ್ ನಾಯರ್ಮೂಲೆ ಕಾರ್ಯಕ್ರಮ ನಿರೂಪಿಸಿದರು. ಡಾ. ಅಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News