ಚುನಾವಣೆಗೆ ಈಗಲೇ ಸಿದ್ಧರಾಗಿ: ಚಂದ್ರಶೇಖರ್
ಮಂಗಳೂರು, ಎ.18: ಮುಂದಿನ ಚುನಾವಣೆಯ ಬಗ್ಗೆ ಕಾಂಗ್ರೆಸ್ ಕಾರ್ಯತಂತ್ರ ರಚಿಸಬೇಕು. ಮನೆ ಮನೆಗೆ ಭೇಟಿ ನೀಡುವ ಕೆಲಸವಾಗಬೇಕು. ಜನರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ಮುಂದಿನ ಚುನಾವಣೆಗೆ ಈಗಿನಿಂದಲೇ ಪಕ್ಷ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್ ಹೇಳಿದ್ದಾರೆ.
ನಗರದಲ್ಲಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಾಲ್ಕು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದುಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿದ ಅವರು ಕಾಂಗ್ರೆಸ್ ತ್ಯಜಿಸಿರುವುದು ಸರಿಯಲ್ಲ. ಯಾವ ಪಕ್ಷವನ್ನು ಟೀಕಿಸುತ್ತಿದ್ದರೋ ಅದೇ ಪಕ್ಷವನ್ನು ಸೇರಿರುವುದು ಎಸ್.ಎಂ. ಕೃಷ್ಣ ಅವರಿಗೆ ಶೋಭೆ ತರುವ ವಿಷಯವಲ್ಲ. ಹಾಗೆಯೇ ಶ್ರೀನಿವಾಸ ಪ್ರಸಾದ್ ಕೂಡ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರ್ಪಡೆ ಗೊಂಡು ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಇವರೆಲ್ಲ ತಮ್ಮ ಸ್ವಾರ್ಥಕ್ಕಾಗಿ ಪಕ್ಷ ತ್ಯಜಿಸಿದ್ದಾರೆ. ಪಕ್ಷದಲ್ಲಿ ಭಿನ್ನಾ ಭಿಪ್ರಾಯವಿದ್ದರೆ ಬಗೆಹರಿಸಿಕೊಳ್ಳಬಹುದಿತ್ತು ಅಥವಾ ಪಕ್ಷದ ಸಭೆಯಲ್ಲೇ ಆ ಬಗ್ಗೆ ಪ್ರಸ್ತಾಪಿಸಬಹುದಿತ್ತು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಮಂಗಳೂರು ಉತ್ತರ ಬ್ಲಾಕ್ ಸಮಿತಿ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಅಮೃತಾ ಕದ್ರಿ, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.