ದೇಶದ ಪರಂಪರೆಯನ್ನು ಉಳಿಸಲು ಒಗ್ಗಟ್ಟಾಗಿ ಹೋರಾಡುವುದು ಅಗತ್ಯ: ಶಾಫಿ ಬೆಳ್ಳಾರೆ
ಫರಂಗಿಪೇಟೆ, ಎ.19: ದೇಶದಲ್ಲಿ ಧರ್ಮಾಧಾರಿತ ಧ್ರುವೀಕರಣ ವ್ಯವಸ್ಥಿತವಾಗಿ ನಡೆಯುತ್ತಿದ್ದು, ರಕ್ಷಣೆ ನೀಡಬೇಕಾದ ಪೋಲಿಸರೇ ಕಾನೂನು ಚೌಕಟ್ಟು ಮೀರಿ ದೌರ್ಜನ್ಯ ನಡೆಸುತ್ತಿದ್ದಾರೆ. ಮಾಂಸದ ಹೆಸರಲ್ಲಿ ಕೊಲೆ, ಅತ್ಯಾಚಾರದಂತಹ ಕೃತ್ಯ ನಡೆಸಿ ತಿನ್ನುವ ಆಹಾರಕ್ಕೂ ನಿರ್ಬಂಧ ಹೇರಲಾಗುತ್ತಿದೆ. ಅನ್ಯಾಯ, ಅಸಹಿಷ್ಣುತೆಯನ್ನು ಪ್ರಶ್ನಿಸಿದವರನ್ನು ಷಡ್ಯಂತ್ರದಿಂದ ದಮನಿಸಲಾಗುತ್ತದೆ. ಸಂವಿಧಾನವನ್ನು ಬಿಗಿದಪ್ಪಿಕೊಂಡು ನಮ್ಮ ದೇಶದ ಪರಂಪರೆಯನ್ನು ಉಳಿಸಲು ನ್ಯಾಯಕ್ಕಾಗಿ ಒಟ್ಟಾಗಿ ಹೋರಾಟ ನಡೆಸುವುದು ಅಗತ್ಯ ಎಂದು ಪಿಎಫ್ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಕರೆ ನೀಡಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಅಲ್-ಖಝಾನ ಸಭಾಂಗಣದಲ್ಲಿ ನಡೆದ ಸ್ನೇಹಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿ.ಎಫ್.ಐ. ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹಮದ್ ಬಂಟ್ವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಗಳೂರು ಚಲೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ಅರಫ ಗ್ರೂಪ್ ಮುಖ್ಯಸ್ಥರಾದ ಸಾವುಞಿ, ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯ ಸಿದ್ದೀಕ್ ಜಿ.ಎಸ್. ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಿ.ಎಫ್.ಐ ಬಂಟ್ವಾಳ ತಾಲೂಕು ಸಮಿತಿ ಕಾರ್ಯದರ್ಶಿ ಸೆಲೀಮ್ ಕೆ., ಬಂಟ್ವಾಳ ತಾಲೂಕಿನ ಮಸೀದಿ ಜಮಾಅತಿನ ಅಧ್ಯಕ್ಷರು ಪದಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಪಿ.ಎಫ್.ಐ. ಬಿಸಿರೋಡ್ ವಲಯಾಧ್ಯಕ್ಷ ಇಮ್ತಿಯಾಝ್ ತುಂಬೆ ಸ್ವಾಗತಿಸಿದರು. ರಹಿಮಾನ್ ಮಠ ವಂದಿಸಿದರು.