ಗೋ ರಕ್ಷಕರು ಭಯೋತ್ಪಾದಕರು: ಸ್ವಾಮಿ ಅಗ್ನಿವೇಶ್
ಜೈಪುರ, ಎ.19: ಜನರಲ್ಲಿ ಭಯ ಹುಟ್ಟಿಸುತ್ತಿರುವ ಗೋರಕ್ಷಕರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಜಾರಿಯಾಗಬೇಕು. ಗೋರಕ್ಷಕರ ಕೃತ್ಯವನ್ನು ಭಯೋತ್ಪಾದಕರ ಕೃತ್ಯದಂತೆಯೇ ಪರಿಗಣಿಸಿ ಭಯೋತ್ಪಾದಕರಿಗೆ ಅನ್ವಯವಾಗುವ ಕಾನೂನುಗಳನ್ನು ಅವರ ಮೇಲೂ ಹೇರಬೇಕು ಎಂದು ಖ್ಯಾತ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಹೇಳಿದ್ದಾರೆ.
ಗೋರಕ್ಷಕರಿಂದ ಹತ್ಯೆಗೀಡಾದ ಪಹ್ಲು ಖಾನ್ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ, ಪಹ್ಲು ಖಾನ್ ರನ್ನು ಕೊಂದ ಗೋರಕ್ಷಕರನ್ನು ಬಂಧಿಸುವಂತೆ ಒತ್ತಾಯಿಸಿ ಸಾಮಾಜಿಕ ಸಂಘಟನೆಗಳು ಇಲ್ಲಿನ ಶಾಹಿದ್ ಸ್ಮಾರಕ್ ಬಳಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಗೋರಕ್ಷಕರು ಭಯೋತ್ಪಾದಕರು ಎಂದರು.
ಖರೀದಿ ಮಾಡುವವರ ವಿವರ ಅರಿಯದೆ ಗೋವುಗಳನ್ನು ಮಾರುವವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಬೇಕು. ಗೋವಿನ ಹೆಸರಲ್ಲಿ ರಾಜಕೀಯ ನಡೆಯಬಾರದು ಎಂದ ಅವರು, ಪಹ್ಲು ಖಾನ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ತಾನು ನೆರವು ನೀಡುವುದಾಗಿ ಭರವಸೆ ನೀಡಿದರು.
ಪಿಯುಸಿಎಲ್ ನ ಕವಿತಾ ಶ್ರೀವಾಸ್ತವ, ಮುಸ್ಲಿಮ್ ವಿಮೆನ್ ವೆಲ್ಫೇರ್ ಸೊಸೈಟಿ ಹಾಗೂ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸದಸ್ಯ ನಿಶಾತ್ ಹುಸೈನ್, ಯಾಸ್ಮೀನ್ ಫಾರೂಕಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭ ಜಿಲ್ಲಾಡಳಿತದ ಮೂಲಕ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆಯವರಿಗೆ ಮನವಿ ಸಲ್ಲಿಸಲಾಯಿತು.