ಎರ್ದೊಗಾನ್‌ಗೆ ಟ್ರಂಪ್ ಅಭಿನಂದನೆ
ವಾಷಿಂಗ್ಟನ್,ಎ.19: ಟರ್ಕಿಯಲ್ಲಿ ಅಧ್ಯಕ್ಷೀಯ ಆಳ್ವಿಕೆ ಬೇಕೆ ಎನ್ನುವ ಜನಮತ ಸಂಗ್ರಹದಲ್ಲಿ ವಿಜಯಿಯಾದ ಅಧ್ಯಕ್ಷ ರಿಸೆಫ್ ತಯ್ಯಿಪ್ ಎರ್ದೊಗಾನ್‌ರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿನಂದನೆ ಸಲ್ಲಿಸಿದ್ದಾರೆ. ಸಿರಿಯದಲ್ಲಿ ಬಶರ್ ಆಡಳಿತಕೂಟ ರಾಸಾಯನಿಕ ದಾಳಿ ನಡೆಸಿದಕ್ಕೆ ಪ್ರತಿಯಾಗಿ ಅಮೆರಿಕ ನಡೆಸಿದ ಆಕ್ರಮಣದ ಕುರಿತು ಉಭಯ ನಾಯಕರು ಚರ್ಚಿಸಿದರೆಂದು ವೈಟ್ ಹೌಸ್ ತಿಳಿಸಿದೆ.
ಪ್ರತಿಪಕ್ಷಗಳು, ವಿದೇಶ ಸಚಿವಾಲಯದ ವಿರೋಧಗಳನ್ನು ಲೆಕ್ಕಿಸದೆ ಟ್ರಂಪ್ ಎರ್ದೊಗಾನ್‌ರಿಗೆ ಫೋನ್ ಕರೆಮಾಡಿ ಅಭಿನಂದಿಸಿದರು. ಟರ್ಕಿ ಮುಂದೆ ಅಧ್ಯಕ್ಷೀಯ ರಿಪಬ್ಲಿಕ್ ಆಗುವುದರೊಂದಿಗೆ ಎರ್ದೊಗಾನ್ ಸರ್ವಾಧಿಕಾರಿಯಾಗಿ ಬದಲಾಗಬಹುದು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆವ್ಯಕ್ತವಾಗಿತ್ತು. ಓರ್ವ ವಿದೇಶಿ ಸರ್ವಾಧಿಕಾರಿಯನ್ನು ಅಮೆರಿಕದ ಅಧ್ಯಕ್ಷರು ಯಾವತ್ತೂ ಬೆಂಬಲಿಸಬಾರದು ಎಂದು ಮಾಜಿ ರಿಪಬ್ಲಿಕನ್ ಪಾರ್ಟಿ ಸದಸ್ಯ ಮತ್ತು 2016ರ ಅಧ್ಯಕ್ಷೀಯ ಚುನಾವಣೆಯ ಸ್ವತಂತ್ರ ಅಭ್ಯರ್ಥಿಯಾಗಿದ್ದ ಇವಾನ್ ಮೆಕ್‌ಮಿಲನ್ ಟ್ವಿಟರ್‌ನಲ್ಲಿಬರೆದಿದ್ದಾರೆ.