ತನ್ನ ತಲೆ ಬೋಳಿಸಿದವರಿಗೆ ಹತ್ತು ಲಕ್ಷ ಬಹುಮಾನ ಘೋಷಿಸಿದ ಮೌಲ್ವಿಗೆ ಸೂಕ್ತ ತಿರುಗೇಟು ನೀಡಿದ ಸೋನು ನಿಗಮ್
ಹೊಸದಿಲ್ಲಿ, ಎ.19: ಅಝಾನ್‌ಗೆ ಸಂಬಂಧಿಸಿ ಬಾಲಿವುಡ್ ಗಾಯಕ ಸೋನು ನಿಗಮ್ ಮಾಡಿರುವ ಟ್ವೀಟ್ ಹೊಸ ತಿರುವು ಪಡೆಯುತ್ತಿದೆ. ತಾನು ಸ್ವತಹ ತನ್ನ ತಲೆ ಬೋಳಿಸಿಕೊಳ್ಳುವೆ. ವೌಲ್ವಿಯೊಬ್ಬರು ನೀಡುವ 10 ಲಕ್ಷ ರೂ. ಬಹುಮಾನವನ್ನು ತಾನೇ ಪಡೆಯುವೆ ಎಂದು ಸೋನು ನಿಗಮ್ ಹೇಳಿದ್ದಾರೆ.
ಮುಸ್ಲಿಮರು ಮುಂಜಾನೆ ಮಾಡುವ ಪ್ರಾರ್ಥನೆಗೆ ನಾನು ಇಸ್ಲಾಂ ಧರ್ಮದವನಲ್ಲದಿದ್ದರೂ ನಿದ್ರೆಯಿಂದ ಬೇಗನೆ ಏಳಬೇಕಾಗುತ್ತದೆ ಎಂದು ಸೋಮವಾರ ಟ್ವೀಟ್ ಮಾಡಿದ್ದ ಸೋನು ನಿಗಮ್ ವಿವಾದ ಹುಟ್ಟುಹಾಕಿದ್ದರು. ಅವರ ಟ್ವೀಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿತ್ತು.ಸೋನು ಟ್ವೀಟ್‌ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು.
ಸೋನು ನಿಗಮ್ ಟ್ವೀಟ್‌ಗೆ ಫತ್ವಾ ಹೊರಡಿಸಿದ್ದ ಕೋಲ್ಕತಾ ಮೂಲದ ವೌಲ್ವಿಯೊಬ್ಬರು, ‘‘ಸೋನು ತಲೆಗೂದಲನ್ನು ಬೋಳಿಸಿ, ಕುತ್ತಿಗೆಗೆ ಚಪ್ಪಲಿಯ ಹಾರ ಹಾಕಿ ದೇಶಾದ್ಯಂತ ಮೆರವಣಿಗೆ ಮಾಡಿದವರಿಗೆ 10 ಲಕ್ಷ ರೂ.ಬಹುಮಾನ ನೀಡುವೆ’’ ಎಂದು ಹೇಳಿದ್ದರು. ಎ.21 ರಂದು ಸೋನು ವಿರುದ್ಧ ನಗರದಲ್ಲಿ ಬೃಹತ್ ರ್ಯಾಲಿ ನಡೆಸುವುದಾಗಿಯೂ ಘೋಷಿಸಿದ್ದರು.
ವೌಲ್ವಿಯ ಟ್ವೀಟ್‌ಗೆ ಇಂದು ಬೆಳಗ್ಗೆ ಪ್ರತಿಕ್ರಿಯೆ ನೀಡಿರುವ ಸೋನು ನಿಗಮ್,‘‘ಇದು ಧಾರ್ಮಿಕ ಗುಂಡಾಗಿರಿಯಲ್ಲ. ನಾನು ಇಂದು ಮಧ್ಯಾಹ್ನ 2 ಗಂಟೆಗೆ ತಲೆ ಬೋಳಿಸಿಕೊಳ್ಳಲು ಸಿದ್ಧನಿದ್ದೇನೆ. ವೌಲ್ವಿಯವರೇ ನೀವು 10 ಲಕ್ಷ ರೂ.ವನ್ನು ಸಿದ್ಧವಾಗಿಟ್ಟುಕೊಳ್ಳಿ. ಈ ಸಂದರ್ಭದ ವರದಿ ಮಾಡಲು ಪತ್ರಕರ್ತರಿಗೂ ಸ್ವಾಗತವಿದೆ’’ ಎಂದು ಹೇಳಿದ್ದಾರೆ.