×
Ad

21ರಂದು ಕೊಂಕಣಿ-ತುಳು ಚಿತ್ರ ತೆರೆಗೆ

Update: 2017-04-19 16:47 IST

ಮಂಗಳೂರು, ಎ.19: ಗ್ಲೋರಿಯಸ್ ಆಂಜೆಲೊರ್ ಬ್ಯಾನರ್‌ನಡಿ ನಿರ್ಮಾಣಗೊಂಡ ಪ್ರಥಮ ಕೊಂಕಣಿ- ತುಳು ಚಲನಚಿತ್ರ ‘ಆಶೆಂ ಜಾಲೆಂ ಕಶೆಂ?’ ‘ಇಂಚ ಆಂಡ ಎಂಚ?’ ಎ. 21ರಂದು ನಗರದ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಕೋಸ್ಟಲ್‌ವುಡ್‌ನಲ್ಲಿ ಕೊಂಕಣಿ- ತುಳು ಭಾಷೆಯ ಚಿತ್ರದ ಪ್ರಯೋಗ ಇದು ಮೊದಲನೆಯಾಗಿದೆ ಎಂದರು.

ತುಳು ಹಾಗೂ ಕೊಂಕಣಿ ಭಾಷೆಗಳ ಸಂಸ್ಕೃತಿ ಹಾಗೂ ವೈಭವವನ್ನು ಒಂದು ಚಿತ್ರದ ಮೂಲಕ ತುಳುನಾಡಿನ ಸಮಸ್ತ ಕಲಾರಸಿಕರಿಗೆ ಒದಗಿಸುವ ಉದ್ದೇಶದಿಂದ ಈ ಪ್ರಯೋಗ ಮಾಡಲಾಗಿದೆ. ಈ ಚಿತ್ರದಲ್ಲಿ ತುಳುವಿನ ಹಲವು ಮಂದಿ ಚಿತ್ರ ಕಲಾವಿದರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಜತೆಗೆ ಈ ಚಿತ್ರದ ಮೂಲಕ ತುಳು ಕಲಾವಿದರಿಗೆ ಕೊಂಕಣಿ ಕಲಿಸುವ ಸಾಧನೆಯನ್ನೂ ಮಾಡಲಾಗಿದೆ ಎಂದವರು ಹೇಳಿದರು.

ಮ್ಯಾಕ್ಸಿಂ ಪಿರೇರಾ ಈ ಚಿತ್ರದ ಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಚಿತ್ರದ ನಾಯಕನಾಗಿ, ಸಿನೊಲ್, ಮಿನೇಜಸ್, ರಂಜಿತಾ ಲೂವಿಸ್, ಜೆನಿಫರ್ ಡಿಸೋಜಾ ನಾಯಕಿಯರ ಪಾತ್ರವನ್ನು ನಿರ್ವಹಿಸಿದ್ದಾರೆ. ಉಳಿದಂತೆ ರೋಹನ್ ಡಿಸೋಜ, ನಿಕಿತ್ ಕೊಟ್ಟಾರಿ, ಜೀವನ್ ವಾಸ್, ಜೋಸೆಫ್ ಮಥಾಯಸ್, ಜುಡಿತ್ ಡಿಸೋಜಾ ಪಾತ್ರ ನಿರ್ವಹಿಸಿದ್ದಾರೆ.

ತುಳು ಸೂಪರ್ ಸ್ಟಾರ್‌ಗಳಾದ ಅರವಿಂದ ಬೋಳಾರ, ಭೋಜರಾಜ ವಾಮಂಜೂರು, ಉಮೇಶ್ ಮಿಜಾರು, ಗೋಪಿನಾಥ ಭಟ್ ತಾರಾಗಣದಲ್ಲಿದ್ದಾರೆ. ಪ್ಯಾಟ್ಸನ್ ಪಿರೇರಾ ಸಂಗೀತ ನೀಡಿದ್ದು, ಮ್ಯಾಕ್ಸಿಂ ಪಿರೇರಾ ಆಂಜೆಲೋರ್, ವಿಲ್ಸನ್ ಕಟೀಲು, ಜ್ಯೋ ರೇಗೋ ಕುಲಶೇಖರ ಮತ್ತು ಜೋನ್ ಎಂ. ಪೆರ್ಮನ್ನೂರು ಸಾಹಿತ್ಯ ರಚಿಸಿದ್ದಾರೆ. ಸುನಿಲ್ ರಾಡ್ರಿಗಸ್ ಸಾಹಸ ನಿರ್ದೇಶನ ನೀಡಿದ್ದಾರೆ. ಕಿಶೋರ್ ಮೂಡಬಿದ್ರೆ ಸಹ ನಿರ್ದೇಶಕರಾಗಿದ್ದು, ಸಾತ್ವಿಕ್ ಹೆಬ್ಬಾರ್ ಮತ್ತು ಸಂದೀಪ್ ಚೌಟ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ವೀಕ್ಷಕರಿಗೆ ಮನರಂಜನೆಯ ಜತೆಗೆ ಕುತೂಹಲವನ್ನು ಕೆರಳಿಸಲಿದೆ ಎಂದು ರಾಯ್ ಕ್ಯಾಸ್ತಲಿನೊ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಟರಾದ ರೂಪೇಶ್ ಶೆಟ್ಟಿ, ಭೋಜರಾಜ ವಾಮಂಜೂರು, ಅರವಿಂದ ಬೋಳಾರ, ಗೋಪಿನಾಥ ಭಟ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News