ಮಂಗಳೂರು: ಇನ್ನು ಮುಂದೆ ಗ್ರಾಮ ಆಸ್ತಿ ನಕಾಶೆ ಉಪಗ್ರಹ ಆಧಾರಿತ
ಮಂಗಳೂರು, ಎ.19: ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳ ಆಸ್ತಿ ನಕಾಶೆಯನ್ನು ಉಪಗ್ರಹ ಆಧಾರಿತವಾಗಿ ಪರಿವರ್ತಿಸಲು ನಿರ್ಧರಿಸಲಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯ ಅಂಗ ಸಂಸ್ಥೆಯಾದ ನ್ಯಾಶನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಹೈದರಾಬಾದ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಜಂಟಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.
ಜಿಪಂ ಸಭಾಂಗಣದಲ್ಲಿ ಭುವನ್ ಮೊಬೈಲ್ ಆ್ಯಪ್ ಬಳಸಿಕೊಳ್ಳುವ, ಆಸ್ತಿ ನಕಾಶೆಯನ್ನು ಉಪಗ್ರಹ ಆಧಾರಿತಗೊಳಿಸುವ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ಇಂದು ನಡೆಯಿತು.
ರಿಮೋಟ್ ಸೆನ್ಸಿಂಗ್ ಸೆಂಟರ್‌ನ ವಿಜ್ಞಾನಿ ಡಾ.ಜಯಶೀಲನ್ ಮಾಹಿತಿ ನೀಡಿದರು. ಆಳ್ವಾಸ್ ಇಂಜಿನಿಯರ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ದ.ಕ ಜಿ.ಪಂ ಉಪಕಾರ್ಯದರ್ಶಿ ಎನ್.ಆರ್.ಉಮೇಶ್ ಹಾಜರಿದ್ದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್ ಸ್ವಾಗತಿಸಿದರು.
ಯೋಜನೆಯ ಮುಖ್ಯಾಂಶಗಳು:
ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ವಾಸ್ತವ ಚಿತ್ರಣ ಪಡೆಯುವುದು, ಹಳ್ಳಿಗಳಲ್ಲಿ ಇರುವ ಎಲ್ಲಾ ಸರಕಾರಿ ಸೌಲಭ್ಯಗಳು ಮತ್ತು ಸೊತ್ತುಗಳ ಬಗ್ಗೆ ಭುವನ್ ಸ್ಯಾಟಲೈಟ್‌ನಿಂದ ನಿಖರ ಮಾಹಿತಿ ಪಡೆಯುವುದು, ಪ್ರಸ್ತುತ ಇರುವ ಆಸ್ತಿಯ ಬಗ್ಗೆ ಅತೀ ಶೀಘ್ರ ಮಾಹಿತಿ ಪಡೆದು ಅದರ ಮುಖಾಂತರ ಸ್ಥಳೀಯ ಆಡಳಿತದಿಂದ ವ್ಯವಸ್ಥೆಯ ಲೋಪದೋಷಗಳ ಸರಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಯೋಜನೆಯ ಮೂಲಕ ಈ ಕೆಳಗಿನ ಸೊತ್ತುಗಳು ಹಳ್ಳಿಗಳಲ್ಲಿ ಇರುವ ಬಗ್ಗೆ ನಿಖರ ಮಾಹಿತಿಯನ್ನು ಉಪಗ್ರಹ ಆಧಾರಿತವಾಗಿ ಪಡೆಯಲಾಗುತ್ತದೆ.
ಶಾಲಾ ಕಾಲೇಜುಗಳು ಮತ್ತು ಸಾರ್ವಜನಿಕ ಗ್ರಂಥಾಲಯಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪಶು ವೈದ್ಯಕೀಯ ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು, ವಿದ್ಯುತ್ ಸಂಬಂಧಿಸಿದ ಯೋಜನೆಗಳು, ಜಲ ಸಂಪನ್ಮೂಲ ಯೋಜನೆಗಳು, ತ್ಯಾಜ್ಯ ನಿರ್ವಹಣಾ ಘಟಕಗಳು, ಅಂಚೆ ಕಚೇರಿ ಮತ್ತು ಬ್ಯಾಂಕ್‌ಗಳ ಮಾಹಿತಿ, ಸ್ಥಳೀಯ ಸಹಕಾರಿ ಸಂಘಗಳು, ರಸ್ತೆ ಮತ್ತು ಸಾರ್ವಜನಿಕ ಸಾರಿಗೆಯ ಮಾಹಿತಿ, ಸರ್ಕಾರಿ ಕಚೇರಿಗಳು ಮತ್ತು ವಸತಿ ಗೃಹಗಳು, ಕೃಷಿ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಯೋಜನೆಗಳು, ಗ್ರಾಮ ವ್ಯಾಪ್ತಿಯಲ್ಲಿರುವ ಕಿರು ಅರಣ್ಯಗಳು, ಕಲ್ಲು ಗಣಿಗಳು ಮತ್ತು ಕಾರ್ಖಾನೆಗಳು ಮೊದಲಾದವುಗಳು.
ಹೈದರಾಬಾದ್‌ನ ನ್ಯಾಶನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಅಭಿವೃದ್ಧಿ ಪಡಿಸಿರುವ ಭುವನ್ ಪಂಚಾಯತ್ ಮೊಬೈಲ್ ಅಪ್ಲಿಕೇಶನ್ ಉಪಯೋಗಿಸಿಕೊಂಡು ಯೋಜನೆಯ ಅಭಿವೃದ್ಧಿ ಗುರಿ ಹಾಕಿಕೊಳ್ಳಲಾಗಿದೆ. ಇಸ್ರೊ ದೇಶದ ಕೇವಲ ಹತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಅದರಲ್ಲಿ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯವೂ ಒಂದು. ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯವು ಇಸ್ರೊ ಜೊತೆಗಿನ ಒಡಂಬಡಿಕೆಯಿಂದ ವಿದ್ಯಾರ್ಥಿಗಳ ಮಿನಿ ಉಪಗ್ರಹ ತಯಾರಿಕೆ ಮತ್ತು ಕರಾವಳಿ ವ್ಯಾಪ್ತಿಯಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ ಸ್ಥಾಪಿಸುವುದಕ್ಕೆ ಮುಂದಾಗಿದೆ.
ಜಿಲ್ಲೆಗೂ ಶೀಘ್ರ ವಿಸ್ತರಣೆ
ಆರಂಭದಲ್ಲಿ ಮಂಗಳೂರು ತಾಲೂಕಿನ 56 ಗ್ರಾ.ಪಂ ವ್ಯಾಪ್ತಿಯಲ್ಲೂ ಆಸ್ತಿಗಳ ನಕಾಶೆಯನ್ನು ಉಪಗ್ರಹ ಆಧರಿತಗೊಳಿಸಲಾಗುವುದು. ಬಳಿಕ ಇಡೀ ಜಿಲ್ಲೆಗೇ ಇದನ್ನು ವಿಸ್ತರಿಸಲು ಇಸ್ರೋಗೆ ಪೂರ್ಣ ಸಹಕಾರ ನೀಡಲಾಗುವುದು ಎಂದು ಜಿಪಂ ಸಿಇಒ ಡಾ.ಎಂ.ಆರ್.ರವಿ ಸಭೆಯಲ್ಲಿ ತಿಳಿಸಿದರು.