ಮೇ 1ರಿಂದ ಕೆಂಪುದೀಪದ ವಿಐಪಿ ಸಂಸ್ಕೃತಿ ಅಂತ್ಯ:ಗಡ್ಕರಿ
ಹೊಸದಿಲ್ಲಿ,ಎ.19: ಬುಧವಾರ ನಡೆದ ಸಂಪುಟ ಸಭೆಯಲ್ಲಿ ದೇಶದಲ್ಲಿ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಮೇ 1ರಿಂದ ಪ್ರಧಾನಿ ವಾಹನವೂ ಸೇರಿದಂತೆ ಎಲ್ಲ ವಾಹನಗಳ ಮೇಲೆ ಕೆಂಪುದೀಪ ಬಳಕೆಯನ್ನು ನಿಷೇಧಿಸಿದೆ. ತುರ್ತುಸೇವೆಯ ವಾಹನಗಳಿಗೆ ಈ ನಿಷೇಧದಿಂದ ವಿನಾಯಿತಿಯನ್ನು ನೀಡಲಾಗಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಸುದ್ದಿಸಂಸ್ಥೆಗೆ ಈ ವಿಷಯವನ್ನು ತಿಳಿಸಿದರು.
ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಗಡ್ಕರಿ ಅವರು ತನ್ನ ಅಧಿಕೃತ ವಾಹನದ ಮೇಲಿನ ಕೆಂಪುದೀಪವನ್ನು ತೆಗೆದು ಹಾಕಿದ ಮೊದಲ ಸಚಿವನಾಗಿ ಇತರರಿಗೆ ಮಾದರಿಯಾದರು.
ಈ ಸರಕಾರವು ಸಾಮಾನ್ಯ ಜನರ ಸರಕಾರವಾಗಿದೆ ಮತ್ತು ವಾಹನಗಳ ಮೇಲೆ ದೀಪಗಳು ಹಾಗು ಸೈರನ್‌ನ ವಿಐಪಿ ಸಂಸ್ಕೃತಿಯನ್ನು ನಿರ್ಮೂಲಿಸಲು ನಿರ್ಧರಿಸಿದೆ ಎಂದು ಹೇಳಿದ ಗಡ್ಕರಿ, ವಾಹನದ ಮೇಲೆ ಕೆಂಪುದೀಪ ಅಳವಡಿಕೆ ವಿಐಪಿ ಸಂಸ್ಕ್ರತಿಯ ಸಂಕೇತವಾಗಿದೆ ಮತ್ತು ಪ್ರಜಾಸತ್ತಾತ್ಮಕ ದೇಶದಲ್ಲಿ ಇದಕ್ಕೆ ಅವಕಾಶವಿಲ್ಲ ಎನ್ನುವುದು ಸರಕಾರದ ಸ್ಪಷ್ಟ ಅಭಿಪ್ರಾಯವಾಗಿದೆ. ಅವು ಈಗ ಯಾವುದೇ ಪ್ರಸ್ತುತತೆ ಹೊಂದಿಲ್ಲ ಎಂದರು.
ಆದರೆ ತುರ್ತು ಮತ್ತು ಪರಿಹಾರ ಸೇವೆಗಳಿಗೆ ಸಂಬಂಧಿಸಿದ ವಾಹನಗಳು, ಆ್ಯಂಬುಲನ್ಸ್, ಅಗ್ನಿ ಶಾಮಕ ಯಂತ್ರ ಇತ್ಯಾದಿಗಳು ಕೆಂಪುದೀಪ ಹೊಂದಿರಲು ಅವಕಾಶ ನೀಡಲಾಗುವುದು.
ಸೈರನ್‌ಗಳ ಮೊಳಗುವಿಕೆ ಮತ್ತು ಕಣ್ಣು ಕೋರೈಸುವ ಕೆಂಪುದೀಪಗಳು ಜನರ ಸಿಟ್ಟಿಗೆ ಕಾರಣವಾಗಿರುವುದರಿಂದ ಇದು ಆರೋಗ್ಯಪೂರ್ಣ ಸಂಸ್ಕೃತಿ ಮತ್ತು ಸಂಪ್ರದಾಯದ ಆರಂಭವಾಗಿದೆ ಎಂದು ಗಡ್ಕರಿ ನುಡಿದರು.
ಹಲವಾರು ರಾಜ್ಯಗಳಲ್ಲಿ ಶಾಸಕರೂ ರಾಜಾರೋಷವಾಗಿ ತಮ್ಮ ವಾಹನಗಳ ಮೇಲೆ ಕೆಂಪುದೀಪಗಳನ್ನು ಅಳವಡಿಸಿಕೊಂಡಿದ್ದಾರೆ ಮತ್ತು ಅವರಲ್ಲಿ ಕೆಲವರು ಕಳಚಬಹುದಾದ ಕೆಂಪುದೀಪಗಳನ್ನು ಬಳಸುತ್ತಿದ್ದಾರೆ. ಸೈರನ್‌ಗಳನ್ನು ಪೈಲಟ್ ಪೊಲೀಸ್ ವಾಹನಗಳು ಮಾತ್ರ ಬಳಸಬಹುದಾಗಿದ್ದರಿಂದ ಸಚಿವರು ಸೈರನ್‌ಗಳನ್ನು ಬಳಸುವುದೂ ಕಾನೂನು ಬದ್ಧವಲ್ಲ ಎಂದು ಅವರು, ಕೆಂಪುದೀಪಕ್ಕೆ ಅಂತ್ಯ ಹಾಡುವ ಈ ಕ್ರಮವು ಮೋದಿ ಸರಕಾರದಲ್ಲಿ ಜನರ ವಿಶ್ವಾಸ ಮತ್ತು ಗೌರವವನ್ನು ಹೆಚ್ಚಿಸಲಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಿಷೇಧವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನಿನಂತೆ ಕ್ರಮ ಜರುಗಿಸಲಾಗುವುದು ಎಂದರು.
ಈ ಸಂಬಂಧ ವಿವರವಾದ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸಲಾಗುವುದು ಮತ್ತು ಮೋಟಾರು ವಾಹನಗಳ ಕಾಯ್ದೆಗೆ ಯಾವುದೇ ತಿದ್ದುಪಡಿಯ ಅಗತ್ಯವಿಲ್ಲ ಎಂದರು.