ಡಾ. ಇಂದಿರಾ ಹೆಗ್ಗಡೆಗೆ "ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ"

Update: 2017-04-19 13:41 GMT

ಉಡುಪಿ, ಎ.19: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ವಿವಿ, ತುಳು ಸಂಶೋಧಕರಿಗೆ ನೀಡುವ "ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ"ಗೆ ಪ್ರಸಿದ್ಧ ಬರಹಗಾರ್ತಿ, ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಹೆಸರನ್ನು ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮಿನಾರಾಯಣ ಆಳ್ವ ಅವರನ್ನೊಳಗೊಂಡ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿದೆ.

ಪ್ರಶಸ್ತಿ 10,000 ರೂ. ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಇಂದಿರಾ ಹೆಗ್ಗಡೆ ಅವರು ಪ್ರೊ. ಚಿದಾನಂದ ಮೂರ್ತಿ ಅವರ ಪ್ರೇರಣೆ ಮತ್ತು ಮಾರ್ಗದರ್ಶನದಲ್ಲಿ ಸಂಶೋಧನ ಕ್ಷೇತ್ರಕ್ಕೆ ಬಂದವರು. ಇವರು ‘ಬಂಟರು ಸಮಾಜೋ ಸಾಂಸ್ಕೃತಿಕ ಅಧ್ಯಯನ’ ಎಂಬ ಸಂಶೋಧನ ಗ್ರಂಥವನ್ನು ಬರೆದಿದ್ದಾರೆ. ‘ತುಳುವರ ಮೂಲತಾನ ಆದಿ ಆಲಡೆ: ಪರಂಪರೆ ಮತ್ತು ಪರಿವರ್ತನೆ’ ಎಂಬ ನಿಬಂಧವನ್ನು ಬರೆದು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮೂಲಕ ಡಿ.ಲಿಟ್ ಪದವಿ ಪಡೆದಿದ್ದಾರೆ.

ಸೃಜನಶೀಲ ಸಾಹಿತಿಯಾಗಿಯೂ ಪ್ರಸಿದ್ಧರಾಗಿರುವ ಡಾ. ಇಂದಿರಾ ಹೆಗ್ಗಡೆ ಹಲವು ಕಥೆ, ಕಾದಂಬರಿ, ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು, ತುಳುವರೆ ಅಟಿಲ್ ಅರಗಣೆ, ಚೇಳಾರುಗುತ್ತು ಮಂಜನ್ನಾಯ್ಗೆರ್ ಸಾಂಸ್ಕೃತಿಕ ಶೋಧ ಇಂದಿರಾ ಹೆಗ್ಗಡೆ ಅವರ ಪ್ರಮುಖ ಅಧ್ಯಯನಾತ್ಮಕ ಕೃತಿಗಳು.

ಇವರಿಗೆ ವಸುದೇವ ಭೂಪಾಲಂ, ಸಾಹಿತ್ಯ ಪುರಸ್ಕಾರ, ಅತ್ತಿಮಬ್ಬೆ, ಅನಂತರಂಗ ಸಂಶೋಧನಾ ಪ್ರಶಸ್ತಿ, ಅಪ್ಪ ಪ್ರಶಸ್ತಿ, ಕೇರಳ ರಾಜ್ಯ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳು ಲಭಿಸಿವೆ. ಮೇ 6ರಂದು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News