ಪೊಲೀಸರ ಕಾರ್ಯ ದಕ್ಷತೆ ಹೆಚ್ಚಿಸಲು ಪೊಲೀಸ್ ಪ್ರಾಧಿಕಾರ ನೆರವು: ನ್ಯಾ. ಎ.ಎಸ್. ಪಚ್ಚಾಪುರೆ
ಮಂಗಳೂರು, ಎ.19: ಪೊಲೀಸ್ ದೂರುಗಳ ಪ್ರಾಧಿಕಾರವು ರಾಜ್ಯದಲ್ಲಿ 2006ನೆ ಇಸವಿಯಲ್ಲಿ ರಚನೆಯಾಗಿದ್ದರೂ ಈ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪ್ರಾಧಿಕಾರಕ್ಕೆ ಬರುತ್ತಿರುವ ದೂರುಗಳ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ಹಾಗಾಗಿ ಈ ಪ್ರಾಧಿಕಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರಾಜ್ಯ ಪ್ರವಾಸ ಆರಂಭಿಸಲಾಗಿದೆ. ಈಗಾಗಲೇ 8 ಜಿಲ್ಲೆಗಳ ಪ್ರವಾಸ ಮುಗಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾ. ಎ.ಎಸ್. ಪಚ್ಚಾಪುರೆ ಹೇಳಿದರು.
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ, ದ.ಕ. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ ಮತ್ತು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ನ್ಯಾಯಾಲಯ ಕಟ್ಟಡ ಸಂಕೀರ್ಣದ ಸಭಾಂಗಣದಲ್ಲಿ ಬುಧವಾರ ನಡೆದ ಪೊಲೀಸ್ ದೂರುಗಳ ಪ್ರಾಧಿಕಾರ ಕುರಿತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪೊಲೀಸ್ ದೂರುಗಳ ಪ್ರಾಧಿಕಾರವು ಪೊಲೀಸರ ಕಾರ್ಯ ದಕ್ಷತೆಯನ್ನು ಹೆಚ್ಚಿಸಲು ಹಾಗೂ ಪ್ರಾಮಾಣಿಕತೆಯಿಂತ ಕರ್ತವ್ಯ ಸಲ್ಲಿಸಲು ಪೂರಕವಾಗಿದೆ. ದೂರುಗಳನ್ನು ಪ್ರಾಧಿಕಾರವು ಸ್ವತಂತ್ರ್ಯವಾಗಿ ವಿಚಾರಣೆ ನಡೆಸುತ್ತದೆ. ಆದರೆ ಯಾವುದೇ ಕ್ರಮ ಕೈಗೊಳ್ಳುವ ಅಧಿಕಾರ ಪ್ರಾಧಿಕಾರಕ್ಕೆ ಇಲ್ಲ. ಪ್ರಾಧಿಕಾರವು ದೂರುಗಳನ್ನು ವಿಚಾರಿಸಿ ವರದಿಯನ್ನು ಸರಕಾರಕ್ಕೆ ಕಳುಹಿಸಿಕೊಡುತ್ತದೆ. ಪ್ರಾಧಿಕಾರಕ್ಕೆ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಆದರೆ ಜಿಲ್ಲಾಧಿಕಾರಿ ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದರಿಂದ ಪೊಲೀಸ್ ದೌರ್ಜನ್ಯ ಬಗೆಗಿನ ಪ್ರಕರಣಗಳ ಬಗ್ಗೆ ತ್ವರಿತವಾಗಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿಯೂ ನಿವೃತ್ತ ನ್ಯಾಯಾಧೀಶರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ನ್ಯಾ. ಎ.ಎಸ್. ಪಚ್ಚಾಪುರೆ ತಿಳಿಸಿದರು.
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜಯ್ ಸಹಾಯ್ ಮಾತನಾಡಿ, 3 ವರ್ಷಗಳಿಂದ ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಪ್ರಾಧಿಕಾರಕ್ಕೆ ಹೊಸ ಆಯಾಮ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ಎಸ್. ಬೀಳಗಿ ಮಾತನಾಡಿ, ಕಾನೂನು ಪದವೀಧರರಿಗೆ ಈಗಿನ ದಿನಗಳಲ್ಲಿ ಉದ್ಯೋಗಕ್ಕೆ ಕೊರತೆ ಇಲ್ಲ. ವಕೀಲಿ ವೃತ್ತಿಗೆ ಬಂದರೂ ವ್ಯಾಜ್ಯಗಳಿಗೇನೂ ಸಮಸ್ಯೆ ಇಲ್ಲ. ಬೇಕಾದಷ್ಟು ದೂರುಗಳು ಲಭ್ಯವಿವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಎಂ.ಆರ್. ಕಾಂಬ್ಳೆ, ಅಪರ ಜಿಲ್ಲಾಧಿಕಾರಿ ಕುಮಾರ್, ಎಸ್ಪಿ ಭೂಷಣ್ ಗುಲಾಬ್‌ರಾವ್ ಬೋರಸೆ, ಡಿಸಿಪಿ ಡಾ. ಸಂಜೀವ ಪಾಟೀಲ್, ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷೆ ಪುಷ್ಪಲತಾ ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ಮಲ್ಲಣ ಗೌಡ ಸ್ವಾಗತಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ವಂದಿಸಿದರು. ವಕೀಲೆ ಅರುಣಾ ಬಿ.ಪಿ. ಕಾರ್ಯಕ್ರಮ ನಿರೂಪಿಸಿದರು.
ಯಾರಿಗೆ ದೂರು ನೀಡಬಹುದು?
ಎಸ್ಪಿ ಮತ್ತು ಅದಕ್ಕಿಂತ ಮೇಲಿನ ಹಂತದ ಪೊಲೀಸ್ ಅಧಿಕಾರಿಗಳು ಗಂಭೀರವಾದ ದುರ್ವರ್ತನೆ ತೋರಿದ ಪ್ರಕರಣಗಳ ಕುರಿತ ದೂರುಗಳನ್ನು ರಾಜ್ಯ ಮಟ್ಟದ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಸಲ್ಲಿಸಬಹುದು. ಡಿವೈಎಸ್ಪಿ ಮತ್ತು ಅದಕ್ಕಿಂತ ಕೆಳಗಿನ ಹಂತದ ಪೊಲೀಸರ ವಿರುದ್ಧದ ದುರ್ವರ್ತನೆಯ ಪ್ರಕರಣಗಳ ಬಗೆಗಿನ ದೂರುಗಳನ್ನು ಜಿಲ್ಲಾಮಟ್ಟದ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸಲ್ಲಿಸಬಹುದು. ದೂರುಗಳನ್ನು ವಕೀಲರ ಮುಖಾಂತರ ಅಥವಾ ಸಾರ್ವಜನಿಕರು ಖುದ್ದಾಗಿ ಅಥವಾ ಪ್ರಾಧಿಕಾರದ ವೆಬ್‌ಸೈಟ್‌ಗೆ ಆನ್‌ಲೈನ್ ಮೂಲಕವೂ ಕಳುಹಿಸಬಹುದಾಗಿದೆ. ಪೊಲೀಸ್ ಕಸ್ಟಡಿಯಲ್ಲಿರುವಾಗ ನಡೆಯುವ ಗಂಭೀರವಾದ ಹಲ್ಲೆ/ಗಾಯ, ಅತ್ಯಾಚಾರ, ಅಕ್ರಮ ಬಂಧನ ಇತ್ಯಾದಿ ಪ್ರಕರಣಗಳು ಗಂಭೀರವಾದ ದುರ್ವರ್ತನೆಯ ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾ. ಎ.ಎಸ್. ಪಚ್ಚಾಪುರೆ ಹೇಳಿದರು.
ದ.ಕ. ಜಿಲ್ಲೆ ಮೊದಲ ಸ್ಥಾನ: ದ.ಕ.ಜಿಲ್ಲಾ ಮಟ್ಟದ ಪೊಲೀಸ್ ದೂರುಗಳ ಪ್ರಾಧಿಕಾರವು ದೂರುಗಳ ಸ್ವೀಕಾರ ಮತ್ತು ವಿಲೇವಾರಿಯಲ್ಲಿ ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿದೆ. ಜಿಲ್ಲಾ ಪ್ರಾಧಿಕಾರಕ್ಕೆ 31 ದೂರುಗಳು ಬಂದಿದ್ದು, ಈ ಪೈಕಿ 16 ದೂರುಗಳು ಇತ್ಯರ್ಥವಾಗಿವೆ. 15 ದೂರುಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ ಎಂದು ನ್ಯಾ. ಎ.ಎಸ್. ಪಚ್ಚಾಪುರೆ ವಿವರಿಸಿದರು.