×
Ad

ಮನೆಗೆಲಸದಾಕೆಗೆ 87 ಲಕ್ಷ ರೂ. ಪರಿಹಾರ : ಭಾರತೀಯ ಸಿಇಒಗೆ ಅಮೆರಿಕ ನ್ಯಾಯಾಲಯ ಆದೇಶ

Update: 2017-04-19 19:33 IST
ಹಿಮಾಂಶು ಭಾಟಿ

ನ್ಯೂಯಾರ್ಕ್, ಎ. 19: ತನ್ನ ಮಾಜಿ ಮನೆಗೆಲಸದಾಕೆಗೆ 1.35 ಲಕ್ಷ ಡಾಲರ್ (ಸುಮಾರು 87 ಲಕ್ಷ ರೂಪಾಯಿ) ಪಾವತಿಸುವಂತೆ ಅಮೆರಿಕದ ನ್ಯಾಯಾಲಯವೊಂದು ಭಾರತೀಯ ಅಮೆರಿಕನ್ ಸಿಇಒಗೆ ಆದೇಶ ನೀಡಿದೆ.

ರೋಸ್ ಇಂಟರ್‌ನ್ಯಾಶನಲ್ ಆ್ಯಂಡ್ ಐಟಿ ಸ್ಟಾಫಿಂಗ್‌ನ ಸಿಇಒ ಹಿಮಾಂಶು ಭಾಟಿಯ ತನ್ನ ಕೆಲಸದಾಕೆಗೆ ಕಡಿಮೆ ಸಂಬಳ ಕೊಟ್ಟಿದ್ದರು ಹಾಗೂ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು ಎನ್ನುವುದು ಕಾರ್ಮಿಕ ಇಲಾಖೆಯ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಈ ತೀರ್ಪು ಹೊರಬಿದ್ದಿದೆ.

ಅಮೆರಿಕದ ಕಾರ್ಮಿಕ ಇಲಾಖೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಸಲ್ಲಿಸಿದ ಮೊಕದ್ದಮೆಯ ವಿಚಾರಣೆ ನಡೆಸಿದ ಕ್ಯಾಲಿಫೋರ್ನಿಯ ಸೆಂಟ್ರಲ್ ಡಿಸ್ಟ್ರಿಕ್ಟ್ ನ್ಯಾಯಾಲಯವು ಎಪ್ರಿಲ್ 11ರಂದು ಈ ತೀರ್ಪು ನೀಡಿದೆ.

ಕನಿಷ್ಠ ವೇತನ ಮತ್ತು ದಾಖಲೆಗಳನ್ನು ಕಾಪಿಡುವುದಕ್ಕೆ ಸಂಬಂಧಿಸಿದ ಅಮೆರಿಕದ ಕಾರ್ಮಿಕ ಕಾನೂನುಗಳನ್ನು ಭಾಟಿಯಾ 2012 ಜುಲೈಯಿಂದ 2014 ಡಿಸೆಂಬರ್‌ವರೆಗೆ ಉದ್ದೇಶಪೂರ್ವಕವಾಗಿ ಹಾಗೂ ಪದೇ ಪದೇ ಉಲ್ಲಂಘಿಸಿರುವುದನ್ನು ಕಾರ್ಮಿಕ ಇಲಾಖೆಯ ವೇತನ ಮತ್ತು ಗಂಟೆ ವಿಭಾಗ ತನ್ನ ತನಿಖೆಯಲ್ಲಿ ಪತ್ತೆಹಚ್ಚಿತ್ತು. ಇದಲ್ಲದೆ ಹಲವು ರೀತಿಯಲ್ಲಿ ಕೆಲಸದಾಕೆಯ ಮೇಲೆ ನಡೆಯಿತೆನ್ನಲಾದ ಶೋಷಣೆ ಮತ್ತು ದೌರ್ಜನ್ಯಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿತ್ತು.

ಕೆಲಸದಾಕೆಯು ಇಂಟರ್‌ನೆಟ್‌ನಲ್ಲಿ ಕಾರ್ಮಿಕ ಕಾನೂನುಗಳ ಬಗ್ಗೆ ತಿಳಿದುಕೊಳ್ಳಲು ಯತ್ನಿಸಿರುವುದು ಗಮನಕ್ಕೆ ಬಂದಾಗ ಭಾಟಿಯಾ ಆಕೆಯನ್ನು 2014 ಡಿಸೆಂಬರ್‌ನಲ್ಲಿ ವಜಾಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News