ಖುರೈಶಿ ಪ್ರಕರಣ ಸಿಐಡಿ ತನಿಖೆಗೆ ಸ್ವಾಗತಾರ್ಹ: ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ
ಮಂಗಳೂರು, ಎ.19: ಖುರೈಶಿ ಪ್ರಕರಣವನ್ನು ರಾಜ್ಯ ಸರಕಾರವು ಸಿಐಡಿ ತನಿಖೆಗೆ ಒಳಪಡಿಸಿರುವುದನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗ ಸ್ವಾಗತಿಸಿದೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಸಂಯೋಜಕ ನೂರುದ್ದೀನ್ ಸಾಲ್ಮರ , ಈ ಮೂಲಕ ಸತ್ಯಾಂಶ ಹೊರಬಂದು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಖುರೈಶಿ ಪ್ರಕರಣವನ್ನು ತನಿಖೆಗೊಳಪಡಿಸುವಂತೆ ಒತ್ತಾಯಿಸಿ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಐಡಿ ತನಿಖೆಗೆ ಒಳಪಡಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಚಿವರ, ಶಾಸಕರ ಬಗ್ಗೆ ಆರೋಪಗಳನ್ನು ಹೊರಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿರುವುದು ಸರಿಯಲ್ಲ ಎಂದರು.
ಈ ಬಾರಿಯ ಬಜೆಟ್‌ನಲ್ಲಿ ಬೆಂಗಳೂರಿನಲ್ಲಿ ಅಬ್ದುಲ್ ಕಲಾಂ ಆಝಾದ್ ಭವನಕ್ಕೆ 20 ಕೋಟಿ ರೂ. ಅನುದಾನ, 200 ಮೌಲಾನ ಆಝಾದ್ ಉರ್ದು ಶಾಲೆಗಳ ಆರಂಭ, ಮಹಾನಗರ ಪಾಲಿಕೆಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ 2 ಕೋ. ರೂ. ವೆಚ್ಚದಲ್ಲಿ ವಸತಿ ನಿಲಯ, ಜಿಲ್ಲಾ ಕೇಂದ್ರಗಳಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ 2 ಕೋಟಿ ರೂ., ಗ್ರಾಮೀಣ ಪ್ರದೇಶಗಳ ಶಾದಿ ಮಹಲ್ ನಿರ್ಮಾಣಕ್ಕೆ 1 ಕೋ. ರೂ., ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ, ಮೈಸೂರಿನಲ್ಲಿ ಮುಸ್ಲಿಂ ಬಾಲಕ, ಬಾಲಕಿಯರ ಅನಾಥಾಶ್ರಮಕ್ಕೆ ಶೈಕ್ಷಣಿಕ ಹಾಗೂ ಮೂಲಭೂತ ಸೌಲಭ್ಯಕ್ಕೆ 2 ಕೋ. ರೂ., ಶೇಖ್ ಇಮಾಮ್ ಗೌರವ ಧನ 3ರಿಂದ 4 ಸಾವಿರಕ್ಕೆ ಏರಿಕೆ, ಮುಅಝ್ಝಿನ್ ಗೌರವಧನ 2 ಸಾವಿರದಿಂದ 3 ಸಾವಿರ ರೂ.ಗೆ ಏರಿಕೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 330 ಕೋಟಿ ರೂ. ಜೊತೆಗೆ ಹೊಸ ಯೋಜನೆಗಳು, ಮನೆ ಮಳಿಗೆ ಯೋಜನೆಯಡಿ ಅಲ್ಪಸಂಖ್ಯಾತ ವಿಶೇಷ ದುರ್ಬಲ ವರ್ಗದವರಿಗೆ 5 ಲಕ್ಷ ರೂ., ಅದರಲ್ಲಿ ಶೇ. 50 ಸಹಾಯಧನ ಮತ್ತು ಶೇ. 50 ಸಾಲ ಯೋಜನೆ, 500 ಮಂದಿಗೆ ಟ್ಯಾಕ್ಸಿ ಖರೀದಿ ಯೋಜನೆಯಲ್ಲಿ 3 ಲಕ್ಷ ರೂ. ಸಹಾಯಧನ ಉಳಿದದ್ದು ಬ್ಯಾಂಕ್ ಸಾಲ ಮೊದಲಾದ ಯೋಜನೆಗಳಿಗೆ ಅನುದಾನ ನೀಡಲಾಗಿದೆ. ಅನುದಾನ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇದಕ್ಕೆ ಶ್ರಮಿಸಿದ ಸಚಿವರಾದ ಬಿ.ರಮಾನಾಥ ರೈ ಮತ್ತು ಯು.ಟಿ.ಖಾದರ್ ಅವರನ್ನು ಅಭಿನಂದಿಸುವುದಾಗಿ ನೂರುದ್ದೀನ್ ಸಾಲ್ಮರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಎನ್.ಎಸ್.ಕರೀಂ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಸದಸ್ಯ ಬಶೀರ್ ಜೋಕಟ್ಟೆ, ಯುವ ಕಾಂಗ್ರೆಸ್ ಮುಖಂಡ ಫಯಾಝ್ ಬಿ.ಕೆ. ಉಪಸ್ಥಿತರಿದ್ದರು.