ಸುಪ್ರೀಂಕೋರ್ಟ್ ತೀರ್ಪು - ಅಡ್ವಾಣಿ, ಜೋಷಿ ರಾಷ್ಟ್ರಪತಿ ಕನಸಿಗೆ ಹಿನ್ನಡೆ
ಹೊಸದಿಲ್ಲಿ, ಎ.19: ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಒಳಸಂಚು ನಡೆಸಿದ ಆರೋಪದಲ್ಲಿ ಹಿರಿಯ ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಮುರಳಿಮನೋಹರ ಜೋಷಿ ಅವರನ್ನು ವಿಚಾರಣೆಗೆ ಒಳಪಡಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯಾಗಬೇಕು ಎಂಬ ಈ ಇಬ್ಬರು ಮುಖಂಡರ ಮಹಾತ್ವಾಕಾಂಕ್ಷೆಗೆ ಹಿನ್ನಡೆ ಉಂಟಾಗಿದೆ.
ರಾಷ್ಟ್ರಪತಿ ಹುದ್ದೆಗೆ ಚುನಾವಣೆ ಜೂನ್-ಜುಲೈ ತಿಂಗಳಲ್ಲಿ ನಡೆಯಲಿದೆ. 89ರ ಹರೆಯದ ಅಡ್ವಾಣಿ ಮತ್ತು 83ರ ಹರೆಯದ ಜೋಷಿ ಅವರನ್ನು ರಾಷ್ಟ್ರಪತಿ ಹುದ್ದೆಯ ಕಣದಲ್ಲಿರುವ ಪ್ರಧಾನ ಅಭ್ಯರ್ಥಿಗಳು ಎಂದು ಬಿಂಬಿಸಲಾಗಿತ್ತು.
1992ರಲ್ಲಿ ನಡೆದ ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಅಡ್ವಾಣಿ, ಜೋಷಿ, ಉಮಾಭಾರತಿ ಹಾಗೂ ಇತರ 13 ಮಂದಿ ಕ್ರಿಮಿನಲ್ ಒಳಸಂಚು ಪ್ರಕರಣದ ವಿಚಾರಣೆ ಎದುರಿಸಬೇಕೆಂದು ಸುಪ್ರೀಂಕೋರ್ಟ್ ತಿಳಿಸಿದೆ. ಇದೀಗ ಲಕ್ನೊದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಎರಡು ವರ್ಷಗಳೊಳಗೆ ಪೂರ್ಣಗೊಳಿಸಬೇಕು ಮತ್ತು ವಿಚಾರಣಾ ನ್ಯಾಯಾಧೀಶರನ್ನು ವರ್ಗಾಯಿಸಕೂಡದು ಎಂದು ನ್ಯಾಯಾಲಯ ಸೂಚಿಸಿದೆ. 16ನೇ ಶತಮಾನದ ಬಾಬರಿ ಮಸೀದಿ ಕಟ್ಟಡವನ್ನು ಗುಂಪೊಂದು ದ್ವಂಸಗೊಳಿಸುವ ಮೊದಲು ರಾಮಕಥಾ ಕುಂಜದ ವೇದಿಕೆಯಲ್ಲಿ ಭಾಷಣ ಮಾಡಿದ್ದರೆಂಬ ಆರೋಪದ ಬಗ್ಗೆ ವಿಚಾರಣೆಯನ್ನು ಅಡ್ವಾಣಿ, ಜೋಷಿ, ಉಮಾಭಾರತಿ, ವಿನಯ್ ಕಟಿಯಾರ್ (ಬಿಜೆಪಿ ನಾಯಕರು), ಸಾಧ್ವಿ ರಿತಂಬರಾ, ದಿವಂಗತ ಆಚಾರ್ಯ ಗಿರಿರಾಜ ಕಿಶೋರ್, ಅಶೋಕ್ ಸಿಂಘಾಲ್ ಮತ್ತು ವಿಷ್ಣು ಹರಿ ದಾಲ್ಮಿಯ(ವಿಹಿಂಪ) ಎದುರಿಸುತ್ತಿದ್ದರು.
ಪಕ್ಷದಲ್ಲಿ ತನ್ನನ್ನು ವಯೋವೃದ್ಧರೆಂದು ಮೂಲೆಗುಂಪು ಮಾಡಲಾಗುತ್ತಿದ್ದು ರಾಜಕೀಯ ನಿವೃತ್ತಿಗೆ ಪಕ್ಷದ ಕೆಲವರಿಂದಲೇ ಪರೋಕ್ಷ ಸಲಹೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ರಂಗದಲ್ಲಿ ತನ್ನ ಪಾತ್ರ ಬಹುತೇಕ ನೇಪಥ್ಯಕ್ಕೆ ಸರಿದಿದೆ ಎಂದು ಅಡ್ವಾಣಿ ‘ಲೋಕಮತ’ ಪತ್ರಿಕೆಗೆ ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು. ಅದಾಗ್ಯೂ, ವಯಸ್ಸು ಮತ್ತು ಕಾರ್ಯ ನಿರ್ವಹಿಸುವ ಸಾಮರ್ಥ್ಯಕ್ಕೆ ಪರಸ್ಪರ ಸಂಬಂಧವಿಲ್ಲ ಎಂದೂ ಅವರು ಒತ್ತಿಹೇಳಿದ್ದರು.
2013ರಲ್ಲಿ ಮೋದಿಯನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದಾಗ ಅಡ್ವಾಣಿ ತೀವ್ರ ಅಸಮಾಧಾನಗೊಂಡಿದ್ದರು. ಆ ಬಳಿಕ, ತಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸಂದರ್ಭ ಸಿಕ್ಕಾಗಲೆಲ್ಲಾ ಹೇಳುತ್ತಿದ್ದರು.
ಮೋದಿ ಒಳಸಂಚು - ಲಾಲೂ : ಅಡ್ವಾಣಿ ವಿರುದ್ಧದ ಒಳಸಂಚಿನ ಆರೋಪವನ್ನು ಪುನರೂರ್ಜಿತಗೊಳಿಸಿರುವ ಕ್ರಮದ ಹಿಂದೆ ಮೋದಿಯವರ ಒಳಸಂಚಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಹೇಳಿದ್ದಾರೆ. ಸಿಬಿಐ ಮೋದಿಯ ಕೈಗೊಂಬೆಯಾಗಿದೆ. ಬಾಬರಿ ಪ್ರಕರಣದಲ್ಲಿ ಒಳಸಂಚು ನಡೆಸಿರುವ ಪ್ರಕರಣವನ್ನು ಪುನರೂರ್ಜಿತಗೊಳಿಸುವುದಾಗಿ ಸಿಬಿಐ ತಿಳಿಸಿದೆ. ಅಡ್ವಾಣಿ ರಾಷ್ಟ್ರಪತಿಯಾಗಲಿದ್ದಾರೆ ಎಂಬ ವರದಿ ಇತ್ತು. ಇದನ್ನು ತಪ್ಪಿಸಲು ಮೋದಿ ಹೂಡಿದ ಒಳಸಂಚಿನ ಫಲವಿದು ಎಂದು ಲಾಲೂ ಆರೋಪಿಸಿದ್ದಾರೆ.
ಇದೀಗ, ಅಡ್ವಾಣಿ ಮತ್ತು ಜೋಷಿಗೆ ಬಿಜೆಪಿ ಮುಖಂಡರು ಬೆಂಬಲ ಸೂಚಿಸಿದ್ದರೂ ಈ ಇಬ್ಬರು ಮುಖಂಡರು ತಮ್ಮ ಸಂಸದ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಬರುವ ಸಾಧ್ಯತೆಯಿದೆ ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ತಾವು ಸಚಿವ ಸಂಪುಟಕ್ಕೆ ಅಥವಾ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹಿರಿಯ ಬಿಜೆಪಿ ನಾಯಕಿ ಉಮಾ ಭಾರತಿ ಸ್ಪಷ್ಟಪಡಿಸಿದ್ದಾರೆ.
ಅದೇನಿದ್ದರೂ, ರಾಜಕೀಯವಾಗಿ ಈ ಪ್ರಕರಣ ಬಿಜೆಪಿಗೆ ಲಾಭದಾಯಕವಾಗಲಿದೆ ಎನ್ನಲಾಗುತ್ತಿದೆ. ಈ ವಿಷಯವನ್ನು ಮುಂದಿಟ್ಟುಕೊಂಡು ಸಂಘಪರಿವಾರ , ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯಕ್ಕೆ ಜನರ ಬೆಂಬಲ ಸಂಗ್ರಹಿಸಿ 2019ರ ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜುಗೊಳಿಸಲು ಮುಂದಾಗುವ ನಿರೀಕ್ಷೆಯಿದೆ.