×
Ad

​24ರಿಂದ ನಿವೇಶನರಹಿತರಿಂದ ಅನಿರ್ದಿಷ್ಟಾವಧಿ ಉಪವಾಸ ಧರಣಿ

Update: 2017-04-19 20:09 IST

ಮಂಗಳೂರು, ಎ.19: ನಿವೇಶನರಹಿತರ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ನಿವೇಶನರಹಿತ ಹೋರಾಟ ಸಮಿತಿಯ ವತಿಯಿಂದ ಎ. 24ರಿಂದ ಹಗಲು ರಾತ್ರಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಶಕ್ತಿನಗರ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.24ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ಉಪವಾಸ ಧರಣಿ ನಡೆಯಲಿದೆ ಎಂದರು.

ಪಾಲಿಕೆಯು ಅರ್ಹ ನಿವೇಶನರಹಿತನ್ನು ಕೈಬಿಟ್ಟು ಆರ್ಥಿಕವಾಗಿ ಬಲಾಢ್ಯರಾದವರನ್ನು, ನಿವೇಶನ ಹೊಂದಿದವರನ್ನು, ಮನೆ ಮಾಲಕರನ್ನು, ತಿಂಗಳಿಗೆ 50 ಸಾವಿರ ರೂ. ಹೆಚ್ಚಿನ ಆದಾಯ ಹೊಂದಿದವರನ್ನು ನಿವೇಶನರಹಿತರೆಂದು ಗೊತ್ತುಪಡಿಸಿ ಪಟ್ಟಿ ಬಿಡುಗಡೆಗೊಳಿಸಿದೆ. ಪಾಲಿಕೆಯು ಬಿಡುಗಡೆಗೊಳಿಸಿರುವ ನಿವೇಶನರಹಿತರ ಪಟ್ಟಿಯಲ್ಲಿ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದವರನ್ನು ಕೈಬಿಡಲಾಗಿದೆ. ವಿಕಲಚೇತನರು, ವಿಧವೆಯರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಜಾತಿ ಸಮುದಾಯದ ಜನರನ್ನು ಯೋಗ್ಯ ರೀತಿಯಲ್ಲಿ ಆಯ್ಕೆ ಮಾಡದೆ ಮೋಸ ಮಾಡಲಾಗಿದೆ. ಇದನ್ನು ವಿರೋಧಿಸಿ ಪ್ರತಿಭಟಿಸಿ ಜಿಲ್ಲಾಧಿಕಾರಿ, ಮನಪಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ವಿವಿಧ ಹಂತಗಳಲ್ಲಿ ನೀಡಿರುವ ಭರವಸೆಗಳನ್ನು ಗಾಳಿಗೆ ತೂರಲಾಗಿದೆ ಎಂದು ಸಂತೋಷ್ ಶಕ್ತಿನಗರ ತಿಳಿಸಿದರು.

ಶಕ್ತಿನಗರ, ಇಡ್ಯಾ ಸುರತ್ಕಲ್‌ನಲ್ಲಿ ಮನೆ ನಿರ್ಮಿಸುವ ದಿನಾಂಕವನ್ನು ಲಿಖಿತ ರೂಪದಲ್ಲಿ ನೀಡಬೇಕು. ಆಯ್ಕೆ ಮಾಡಿರುವ 2,000 ನಿವೇಶನರಹಿತರ ಪಟ್ಟಿಯಲ್ಲಿರುವ ಅನರ್ಹರನ್ನು ತಕ್ಷಣ ಕೈಬಿಡಬೇಕು. ನಿವೇಶನಕ್ಕೆ ಮೀಲಿಟ್ಟಿರುವ ಕಣ್ಣೂರಿನ ಕಣ್ಣಗುಡ್ಡೆ 11.25 ಎಕ್ರೆ ಜಾಗಕ್ಕೆ ಅರ್ಹ ನಿವೇಶನರಹಿತರನ್ನು ಶೀಘ್ರದಲ್ಲೇ ಆಯ್ಕೆ ಮಾಡಬೇಕು. ನಿವೇಶನರಹಿತರ ಹೋರಾಟ ಸಮಿತಿ ಜೊತೆ ದ್ವಿಪಕ್ಷೀಯ ಸಭೆ ನಿಗದಿಪಡಿಸಬೇಕು ಎಂಬಿತ್ಯಾದಿ ಬೇಚಿಕೆಗಳನ್ನು ಸಮಿತಿ ಮುಂದಿಟ್ಟಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ನಿವೇಶನರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಪ್ರೇಮನಾಥ ಜಲಿಗುಡ್ಡೆ, ಕಾರ್ಯದರ್ಶಿ ನೂತನ್ ಕೊಂಚಾಡಿ, ಉಪಾಧ್ಯಕ್ಷೆ ಮಂಜುಳಾ ಶೆಟ್ಟಿ, ಖಜಾಂಚಿ ಪ್ರಭಾವತಿ ಬೋಳಾರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News