ಎ.21ರಿಂದ ಉಡುಪಿಯಲ್ಲಿ ಸಾಗರ ರಕ್ಷಾ ಕವಚ ಕಾರ್ಯಾಚರಣೆ
ಉಡುಪಿ, ಎ.19: ಜಿಲ್ಲೆಯಲ್ಲಿ ಎ.21 ಮತ್ತು 22ರಂದು ಸಾಗರ ರಕ್ಷಾ ಅಣಕು ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಭವಿಷ್ಯದಲ್ಲಿ ಭಯೋತ್ಪಾದಕರ ದಾಳಿ ತಡೆಯುವ ಉದ್ದೇಶದಿಂದ ಈ ಅಣಕು ಕಾಯಾಚರಣೆ ನಡೆಸಲಾಗುತ್ತಿದ್ದು, ಕರಾವಳಿ ಕಾವಲು ಪೊಲೀಸ್ ಪಡೆ, ಪೊಲೀಸ್ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಕಾರ್ಯಾಚರಣೆ ಸಂದರ್ಭದಲ್ಲಿ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಕಳೆದ ಬಾರಿ ನಡೆಸಿದ ಕಾರ್ಯಾಚರಣೆಯಲ್ಲಿ ದಾಳಿಕೋರರನ್ನು ಯಶಸ್ವಿಯಾಗಿ ಬಂಧಿಸಲಾಗಿತ್ತು ಎಂದವರು ತಿಳಿಸಿದರು.
ಕಾರ್ಯಾಚರಣೆಯ ದಿನಗಳಲ್ಲಿ ಸಾರ್ವಜನಿಕರು ಯಾವುದೇ ಸಂಶಯಾಸ್ಪದ ವಸ್ತುಗಳು, ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಯ 100 ಸಂಖ್ಯೆಗೆ, ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ. 1077, 2574802ಗೆ ಹಾಗೂ ಕರಾವಳಿ ಪೊಲೀಸ್ ಪಡೆಯ ಕಂಟ್ರೋಲ್ ರೂಂ ನಂ.1093ಗೆ ಟೋಲ್ ಫ್ರೀ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಸಮುದ್ರದಲ್ಲಿ ಮೀನುಗಾರರು ಅಪರಿಚಿತ ವ್ಯಕ್ತಿಗಳು ಅಥವಾ ದೋಣಿ ಕಂಡು ಬಂದಲ್ಲಿ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡುವಂತೆ ಹಾಗೂ ಅಪರಿಚಿತರನ್ನು ಬೋಟ್‌ಗಳ ಒಳಗೆ ಹತ್ತಿಸಿಕೊಳ್ಳದಂತೆ ತಿಳಿಸಿದರು.
ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ವ್ಯಾಪಕ ತಪಾಸಣೆ ನಡೆಸುವಂತೆ ಹಾಗೂ ಭಯೋತ್ಪಾದಕರು ಡ್ರೋಣ್‌ಗಳ ಮೂಲಕ ಸಹ ದಾಳಿ ಮಾಡುವ ಸಾಧ್ಯತೆಯಿರುವುದರಿಂದ, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ದೇವಾಲಯಗಳು, ವಿದ್ಯಾಸಂಸ್ಥೆಗಳು, ಬಸ್‌ನಿಲ್ದಾಣ, ರೈಲ್ವೆನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ ಹಾಗೂ ಮಾಲ್‌ಗಳ ಬಳಿ ಹೆಚ್ಚಿನ ಸಿಬ್ಬಂದಿ ನಿಯೋಜಿ ಸುವಂತೆ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮೀನುಗಾರರಿಗೆ ಈ ಕಾರ್ಯಾಚರಣೆ ಕುರಿತಂತೆ ಹೆಚ್ಚಿನ ಮಾಹಿತಿ ನೀಡುವಂತೆ ಹಾಗೂ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ಕರಾವಳಿ ಪೊಲೀಸ್ ಪಡೆಗೆ ಬೋಟ್‌ಗಳನ್ನು ಒದಗಿಸುವಂತೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾದಿಕಾರಿ ಅನುರಾಧ, ಪೊಲೀಸ್, ಕರಾವಳಿ ಕಾವಲು ಪಡೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.