×
Ad

"ಕುಡ್ಲ ಎಕ್ಸ್‌ಪ್ರೆಸ್" ರೈಲು ಓಡಾಟ: ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಅನುಮತಿ

Update: 2017-04-19 22:25 IST

ಮಂಗಳೂರು, ಎ.19: "ಕುಡ್ಲ ಎಕ್ಸ್‌ಪ್ರೆಸ್" ರೈಲನ್ನು ಬೆಂಗಳೂರಿನಿಂದ ಮಂಗಳೂರು ಸೆಂಟ್ರಲ್ ನಿಲ್ದಾಣದವರೆಗೆ ಓಡಿಸದಿರುವುದರ ಬಗ್ಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ರಾಜ್ಯ ಹೈಕೋರ್ಟ್ ಉಡುಪಿ ರೈಲ್ವೆ ಯಾತ್ರಿಕರ ಸಂಘಕ್ಕೆ ಅನುಮತಿ ನೀಡಿದೆ. ಇದರೊಂದಿಗೆ ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಕುಡ್ಲ ಎಕ್ಸ್‌ಪ್ರೆಸ್‌ನ್ನು ಓಡಿಸುವುದರ ವಿರುದ್ಧ ಸಂಘವು ರೈಲ್ವೆ ಇಲಾಖೆಯೊಂದಿಗೆ ಕಾನೂನು ಸಮರ ಆರಂಭಿಸಿದೆ.

ಕುಡ್ಲ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಸಂಬಂಧಿಸಿ ಉಡುಪಿ ರೈಲ್ವೆ ಯಾತ್ರಿಕರ ಸಂಘವು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂತದಲ್ಲಿ ನೈಋತ್ಯ ರೈಲ್ವೆ ವಲಯ ಮಾ.7ರಂದು ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಿದೆ. ಅದರಲ್ಲಿ "ಕುಡ್ಲ ಎಕ್ಸ್‌ಪ್ರೆಸ್" ರೈಲನ್ನು ಮಾ.31ರೊಳಗೆ ಮಂಗಳೂರು ಸೆಂಟ್ರಲ್-ಬೆಂಗಳೂರು ಸೆಂಟ್ರಲ್ ಮಧ್ಯೆ ಓಡಿಸುವುದಾಗಿ ತಿಳಿಸಿತ್ತು. ಆದರೆ ಈ ರೈಲು ಪ್ರಾರಂಭಗೊಂಡಾಗ ಯಶವಂತಪುರದಿಂದ ಮಂಗಳೂರು ಜಂಕ್ಷನ್‌ವರೆಗೆ ಸೀಮಿತಗೊಳಿಸಿತು.

ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಸಂದರ್ಭ ಉಡುಪಿ ರೈಲ್ವೆ ಯಾತ್ರಿಕರ ಸಂಘದ ಪರ ವಕೀಲರು ಈ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿರುವುದನ್ನು ಪ್ರಶ್ನಿಸಿ ಆಕ್ಷೇಪಣೆ ಸಲ್ಲಿಸಲು ಅನುಮತಿ ನೀಡುವಂತೆ ಕೋರಿದ್ದಾರೆ. ಸಂಘದ ಈ ಕೋರಿಕೆಯನ್ನು ಮನ್ನಿಸಿದ ನ್ಯಾಯಾಲಯ ನೈಋತ್ಯ ರೈಲ್ವೆ ಸಲ್ಲಿಸಿದ್ದ ಅಫಿದವಿತ್‌ಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಅನುಮತಿ ನೀಡಿದೆ.

ಆ ಹಿನ್ನಲೆಯಲ್ಲಿ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಎ.24ರಂದು ಬೆಂಗಳೂರಿಗೆ ತೆರಳಿ ಅಕ್ಷೇಪಣಾ ಅರ್ಜಿಯಲ್ಲಿ ಉಲ್ಲೇಖಿಸಬೇಕಾದ ಅಂಶಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News